- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರಮೋದ್‌ ಮುತಾಲಿಕ್‌ ಶಿವಸೇನೆಯಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ

pramod muthalik [1]ಮಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ, ರಾಜ್ಯದ ಗಡಿ ವಿಚಾರದಲ್ಲಿ ಪದೇಪದೇ ತಗಾದೆ ತೆಗೆದು ಮಹಾರಾಷ್ಟ್ರ ಪರ ದನಿ ಎತ್ತುವ ಶಿವಸೇನೆ ಪಕ್ಷದ ಟಿಕೆಟ್‌ನಿಂದಲೇ ಸ್ಪರ್ಧಿಸಲು ಇದೀಗ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಮುಂದಾಗಿದ್ದಾರೆ!

ಈ ವಿಚಾರವನ್ನು ಖುದ್ದು ಮುತಾಲಿಕ್‌ ಅವರೇ ತಿಳಿಸಿದ್ದಾರೆ. ಮಂಗಳೂರಿಗೆ ಸೋಮವಾರ ಭೇಟಿ ನೀಡಿದ್ದ ವೇಳೆ ಉದಯವಾಣಿಯೊಂದಿಗೆ ಮಾತನಾಡಿದ ಅವರು ಮುಂದಿನ ಚುನಾವಣೆಯಲ್ಲಿ ತಮ್ಮ ಸಂಘಟನೆ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ಹೇಳಿದ್ದಿಷ್ಟು: “ಶಿವಸೇನೆಯನ್ನು ಕರ್ನಾಟಕದಲ್ಲಿ ಕಟ್ಟುವ ನೆಲೆಯಲ್ಲಿ ಹಾಗೂ ಹಿಂದೂ ಸಮಾಜದ ಶ್ರೇಯಸ್ಸಿಗಾಗಿ ಮೊದಲ ಹಂತದ ಪ್ರಯತ್ನ ನಡೆಸಲಾಗಿದೆ. ಈಗಾಗಲೇ ಈ ಸಂಬಂಧ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ಜತೆಯಲ್ಲಿ ಎರಡು ಸುತ್ತಿನ ಮಾತುಕತೆಯನ್ನೂ ನಡೆಸಲಾಗಿದೆ. ಕೆಲವೇ ದಿನಗಳಲ್ಲಿ ಅಂತಿಮ ಮಾತುಕತೆ ನಡೆಯಲಿದ್ದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

“ಶಿವಸೇನೆಯ ಹೆಸರಿಲ್ಲಿ ಸ್ಪರ್ಧೆಗೆ ಅವಕಾಶ ದೊರಕಿದರೆ, ಶ್ರೀರಾಮ ಸೇನೆಯ ಪ್ರಮುಖರು ಕರ್ನಾಟಕದಲ್ಲಿ ಸ್ಪರ್ಧೆ ನಡೆಸಲಿದ್ದಾರೆ. ಈ ಮೂಲಕ ಹಿಂದೂ ಸಮಾಜದ ಶ್ರೇಯಸ್ಸಿಗಾಗಿ ನಮ್ಮ ಹೋರಾಟ ಎಂದಿನಂತೆ ಮತ್ತೆ ಮುಂದು ವರಿಯಲಿದೆ. ಅಕಸ್ಮಾತ್‌ ಶಿವಸೇನೆ ಜತೆಗೆ ಶ್ರೀರಾಮ ಸೇನೆಯ ಮಾತುಕತೆಯಲ್ಲಿ ಏನಾದರೂ ವ್ಯತ್ಯಾಸ ಆದರೆ ಅಥವಾ ಒಪ್ಪಂದ ಆಗದಿದ್ದರೆ, ಸ್ವತಂತ್ರವಾಗಿಯಾದರೂ ನಾವು ಸ್ಪರ್ಧೆ ಮಾಡುವುದು ನಿಶ್ಚಿತ. ಶೃಂಗೇರಿ, ಚಿಕ್ಕಮಗಳೂರು, ವಿಜಯ್‌ಪುರ್‌ ನಗರ, ಬೆಳಗಾವಿ ಸೇರಿದಂತೆ ಐದು ಭಾಗದಲ್ಲಿ ಈಗಾಗಲೇ ನಾವು ಸರ್ವೆ ಮಾಡಿದ್ದು, ಈ ಭಾಗದಲ್ಲಿ ಶ್ರೀರಾಮ ಸೇನೆ ಬಲಿಷ್ಠವಾಗಿರುವುದು ಸ್ಪಷ್ಟವಾಗಿದೆ. ಹೀಗಾಗಿ, ಶ್ರೀರಾಮ ಸಂಘಟನೆ ಪ್ರಾಬಲ್ಯ ಹೊಂದಿರುವ ಕೇತ್ರಗಳಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆಗಿಳಿಯುವುದು ಖಚಿತ’.

“ಮುಂದಿನ ಚುನಾವಣೆಯಲ್ಲಿ ಶ್ರೀರಾಮ ಸೇನೆ ಸ್ಪರ್ಧೆಗೆ ಮೈತ್ರಿ ಮಾಡುವುದಾದರೆ ನಮ್ಮ ಮೊದಲ ಆದ್ಯತೆ ಬಿಜೆಪಿ. ಆದರೆ ಬಿಜೆಪಿಯವರು ಇಲ್ಲಿಯವರೆಗೆ ಯಾವುದೇ ರೀತಿಯ ಸ್ಪಂದನೆಯನ್ನು ನೀಡಿಲ್ಲ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಲಾಗುವುದು.