- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಗುರುವಾಯನಕೆರೆ: ರಾಜ್ಯಮಟ್ಟದ ಸಮಾಲೋಚನಾ ಸಭೆ

gurvaynkere [1]ಮಂಗಳೂರು: ’ಮಂಜುನಾಥಸ್ವಾಮಿ ಹೆಸರಿನಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿರುವುದೇ ದೊಡ್ಡ ಸೇವೆ ಎಂದು ವೀರೇಂದ್ರ ಹೆಗ್ಗಡೆಯವರು ಪ್ರಚಾರ ಮಾಡುತ್ತಿರುವುದನ್ನೇ ಸತ್ಯವೆಂದು ನಂಬಿ ಪ್ರಧಾನ ಮಂತ್ರಿಗಳು ಅವರನ್ನು ಉಜಿರೆಯಲ್ಲಿ ಭಾರೀ ಹೊಗಳಿದ್ದು ಸರಿಯಲ್ಲ. ಇವರ ಮೈಕ್ರೋಫೈನಾನ್ಸ್ ಕಾರ್ಪೊರೇಟ್‌ಗಿಂತ ಅಪಾಯಕಾರಿ. ಇದರ ವಿರುದ್ಧ ರಾಜ್ಯದ 30 ಜಿಲ್ಲೆಗಳಲ್ಲಿಯೂ ಜಾಗೃತಿ ಮೂಡಿಸಲು ನಮ್ಮ ಒಕ್ಕೂಟದ ಮತ್ತು ಪ್ರಜಾಧಿಕಾರ ವೇದಿಕೆ-ಕರ್ನಾಟಕದ ನೂರಾರು ಎನ್‌ಜಿಒಗಳು ನಿರ್ಧರಿಸಿದೆ ಎಂದು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ-ಕರ್ನಾಟಕ (ಫೆವಾರ್ಡ್-ಕೆ)ದ ಉಪಾಧ್ಯಕ್ಷ ಎಸ್.ಕುಮಾರ್ ಹೇಳಿದರು. ಜಂಟಿ ಕ್ರಿಯಾ ಸಮಿತಿ, ನಾಗರಿಕ ಸೇವಾ ಟ್ರಸ್ಟ್ ಮತ್ತು ಪ್ರಜಾಧಿಕಾರ ವೇದಿಕೆ-ಕರ್ನಾಟಕದ ಆಶ್ರಯದಲ್ಲಿ ಗುರುವಾಯನಕೆರೆಯಲ್ಲಿ  ನಡೆದ ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ವಿಚಾರವಾದಿಗಳ ಸಂಘಟನೆಗಳ ರಾಷ್ಟೀಯ ಒಕ್ಕೂಟದ ಅಧ್ಯಕ್ಷ ಡಾ| ನರೇಂದ್ರ ನಾಯಕ್ ’ಹೆಗ್ಗಡೆಯವರ ಸಂಸ್ಥಾನಗಳ ಭೂದಾಹ, ಧನದಾಹ, ಕಾನೂನುಬಾಹಿರ ಕೃತ್ಯಗಳ ಕುರಿತು ಜಾಗೃತಿ ಮೂಡಿಸಲು ಜಾಥಾಗಳನ್ನು ಸಂಘಟಿಸಬೇಕು’ ಎಂದರು. ಜಮಾತೆ ಉಲ್ ಫಲಾಹ್‌ನ ದ.ಕ-ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ’ಟ್ರಸ್ಟ್ ತನ್ನ ಕಾರ್ಯವನ್ನು ಹಿಂದಿನಂತೆ ಪುನಃ ಹಳ್ಳಿಹಳ್ಳಿಯಲ್ಲಿ ಮಾಡಬೇಕು. ಜನರಲ್ಲಿ ಈ ನಿರೀಕ್ಷೆ ತುಂಬಾ ಇದೆ. ತನ್ನ ಬೆಂಬಲ ಸದಾ ಇದೆ’ ಎಂದರು.

ಸಾಮಾಜಿಕ ಕಾರ್ಯಕರ್ತ ಸೋಮಶೇಖರ್ ದೇವಸ್ಯ ’ನಮ್ಮ ಹೋರಾಟ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಲ್ಲ. ಜನರನ್ನು ತನ್ನ ಕಪಿ ಮುಷ್ಠಿಯಲ್ಲಿಡುವ ಶೋಷಣೆಯ ವಿರುದ್ಧ ಮಾತ್ರ’ ಎಂದು ಸ್ಪಷ್ಟಪಡಿಸಿದರು. ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಮತ್ತು ರಂಜನ್ ರಾವ್ ಯರ್ಡೂರ್ ’ನಾವು ಸತ್ಯದ ದಾಖಲೆಗಳ ಆಧಾರದಲ್ಲಿ, ಕಾನೂನು ಚೌಕಟ್ಟಿನಲ್ಲಿ ೫ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಒಂದೊಂದಾಗಿ ಯಶಸ್ಸು ಸಿಗುತ್ತಾ ಇದೆ’ ಎಂದು ಉದಾಹರಣೆ ಸಹಿತ ವಿವರಿಸಿದರು.

ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 70 ನಾಗರಿಕ ಸೇವಾ ಬಳಗಗಳ ಸಕ್ರಿಯತೆ ಆರಂಭವಾಗಿದೆ’ ಎಂದು ಸಭೆಗೆ ತಿಳಿಸಲಾಯ್ತು.
ದ.ಕ ಪರಿಸರಾಸಕ್ತರ ಒಕ್ಕೂಟದ ಉಪಾಧ್ಯಕ್ಷ ಐ.ಕುಶಾಲಪ್ಪ ಗೌಡ, ಕೃಷಿಕರ ವೇದಿಕೆ-ಕರ್ನಾಟಕದ ಕಾರ್ಯದರ್ಶಿ ಸದಾಶಿವ ಹೆಗ್ಡೆ, ಸಹ ಕಾರ್ಯದರ್ಶಿ ಸುಳ್ಯಕೋಡಿ ಮಾಧವ ಗೌಡ, ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷೆ ವಿದ್ಯಾ ನಾಯಕ್, ಕಾರ್ಯದರ್ಶಿ ರತ್ನಾ ಹೊಸಳಿಕೆ, ದಲಿತ ಅಭಿವೃದ್ಧಿ ಸಮಿತಿ ಸಂಚಾಲಕರು ಕೆ.ಸೋಮ ಮತ್ತು ನಾರಾಯಣ ಕಿಲಂಗೋಡಿ ಮತ್ತಿತರು ಅಭಿಪ್ರಾಯ ಮಂಡಿಸಿದರು.

ಟ್ರಸ್ಟ್ ಉಪಾಧ್ಯಕ್ಷ ಕೆ.ರಮಾಂದ ಸಾಲಿಯಾನ್ ಮಾತಾಡಿ ಧಾರ್ಮಿಕ ದತ್ತಿ ಕಾಯ್ದೆ ಪ್ರಕಾರ ಧರ್ಮಸ್ಥಳ ದೇವಳ ನೋಂದಾಣಿಯಾಗಬೇಕೆಂದೂ ಇದು ಕುಟುಂಬದ ದೇವಳ ಅಲ್ಲವೆಂದೂ ಪುತ್ತೂರು ಎಸಿ ಮಾಡಿದ ಶಿಫಾರಸು ಆಧರಿಸಿ ಹೈಕೋರ್ಟ್‌ನಲ್ಲಿ ರಿಟ್ ಫೈಲ್ ಮಾಡಬೇಕು ಎಂದರು.
2018 ಫೆಬ್ರವರಿಯಲ್ಲಿ ’ಜನರ ಪ್ರಣಾಳಿಕೆ-ಹಕ್ಕೊತ್ತಾಯ’ಕ್ಕಾಗಿ ಸಮಾನಾಸಕ್ತ ಸಂಘಟನೆಗಳ ರಾಜ್ಯಮಟ್ಟದ ಬೃಹತ್ ಸಮಾವೇಶವನ್ನು ಏರ್ಪಡಿಸಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಮತ್ತು ರಾಜಕೀಯ ಪಕ್ಷಾಧ್ಯಕ್ಷರನ್ನು ಆಹ್ವಾನಿಸುವ ಸಲಹೆಯನ್ನು ಅಂಗೀಕರಿಸಲಾಯ್ತು.
ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಎಚ್ ಸ್ವಾಗತಿಸಿ, ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪವಾದ) ತಾಲೂಕು ಸಂಚಾಲಕ ಆರ್.ರಮೇಶ್ ವಂದಿಸಿದರು.