ಮಂಗಳೂರು: ಮಂಗಳೂರು ಹೊರವಲಯದ ಅಡ್ಯಾರು ಗ್ರಾಮದ ಸಹ್ಯಾದ್ರಿ ಕಾಲೇಜ್ ನ ಹಿಂಬದಿಯಲ್ಲಿ ನೇತ್ರಾವತಿ ನದಿಯ ದಡದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಯ ಮೇಲೆ ಮಂಗಳೂರು ಪೊಲೀಸರು ದಾಳಿ ನಡೆಸಿದ್ದಾರೆ. ಯಂತ್ರೋಪಕರಣ ಸಹಾಯದಿಂದ ಮರಳನ್ನು ವಾಹನಗಳಿಗೆ ಲೋಡ್ ಮಾಡುವ ಬಗ್ಗೆ ಹಾಗೂ ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ಮರಳು ಶೇಖರಿಸಿ ವಾಹನಗಳಿಗೆ ಪ್ಲಾಸ್ಟಿಕ್ ಚೀಲದ ಮೂಲಕ ತುಂಬಿಸಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು.
ಈ ಹಿನ್ನಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 2 ಹಿಟಾಚಿ ಯಂತ್ರಗಳು, 2 ಜೆಸಿಬಿ ಯಂತ್ರಗಳು, ಮರಳು ತುಂಬಿದ ಚೀಲಗಳಿದ್ದ 2 ಲಾರಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪ್ಲಾಸ್ಟಿಕ್ ಚೀಲಗಳಲ್ಲಿ ಮರಳನ್ನು ತುಂಬಿಸಿ ವಾಹನಗಳ ಮೂಲಕ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ಸಾಗಿಸಲು ಸಿದ್ದಗೊಳಿಸಿಡಲಾಗಿತ್ತು ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಬ್ದುಲ್ ಲತೀಪ್ ಮತ್ತು ಜಾಗದ ಮಾಲಿಕರಾದ ಡೆಲ್ವಿ ಆಸ್ಟಿನ್ ಫೆರ್ನಾಂಡಿಸ್ ಮತ್ತು ವಾಹನಗಳ ಮಾಲಿಕರ ವಿರುದ್ದ ಪ್ರಕರಣ ದಾಖಲಾಗಿದೆ.
ಕಾರ್ಯಚರಣೆಯ ವೇಳೆ ವಶಪಡಿಸಿಕೊಂಡ ಯಂತ್ರೋಪಕರಣಗಳು, ಮರಳು ತುಂಬಿದ ವಾಹನಗಳು ಹಾಗೂ ಮರಳಿನ ಒಟ್ಟು ಮೌಲ್ಯ 1,40,26,000 ರೂಪಾಯಿ ಎಂದು ಅಂದಾಜಿಸಲಾಗಿದೆ.
Click this button or press Ctrl+G to toggle between Kannada and English