ಸೌದಿಯಲ್ಲಿ ಗೃಹ ಬಂಧನದಲ್ಲಿದ್ದ ಮಹಿಳೆಯ ರಕ್ಷಣೆ

1:09 PM, Tuesday, November 21st, 2017
Share
1 Star2 Stars3 Stars4 Stars5 Stars
(No Ratings Yet)
Loading...

Vijayaಮಂಗಳೂರು: ಅನಾರೋಗ್ಯ ಪೀಡಿತ ಪತಿ ಮತ್ತು ಮಗನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತು ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ ಮಂಗಳೂರಿನ ವಾಮಂಜೂರಿನ ಮಹಿಳೆಯೋರ್ವರು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲಾ ಎಸ್‌ಡಿಪಿಐ ಸಂಘಟನೆಯು ಸೌದಿಯಲ್ಲಿರುವ ತನ್ನ ಯುವಕರ ಸಂಘಟನೆಯ ಮೂಲಕ ಈ ಮಹಿಳೆಯನ್ನು ಪತ್ತೆಹಚ್ಚಿ

ರಕ್ಷಿಸುವಲ್ಲಿ ನೆರವಾಗಿದೆ.

ವಾಮಂಜೂರಿನ ಕೆಲರಾಯ್‌ಕೋಡಿ 2ನೇ ಬ್ಲಾಕ್‌ನ ಬಾಲಪ್ಪ ಬಾಲಕೃಷ್ಣ (55) ಅವರ ಪತ್ನಿ ವಿಜಯಾ (43) ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ಮಹಿಳೆ.ಹಲವು ತಿಂಗಳುಗಳಿಂದ ಸರಿಯಾಗಿ ಫೋನ್‌ ಸಂಪರ್ಕಕ್ಕೆ ಸಿಗದೆ,ಊರಿಗೆ ಮರಳಲೂ ಸಾಧ್ಯವಾಗದೆ ಸೌದಿ ಅರೇಬಿಯಾದ ದಮಾಮ್‌ ನಗರದಲ್ಲಿ ಗೃಹಬಂಧನದಲ್ಲಿರುವ ವಿಜಯಾ ಅವರ ಬಿಡುಗಡೆಯ ನಿರೀಕ್ಷೆಯಲ್ಲಿ ವೃದ್ಧ ಪತಿ ಮತ್ತು ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ಮಗ ಜಗಜೀವನ್‌ ದಿನ ದೂಡುತ್ತಿದ್ದಾರೆ.

ತೀರಾ ಬಡ ಕುಟುಂಬಕ್ಕೆ ವಿಜಯಾ ಅವರೇ ಆಧಾರಸ್ತಂಭವಾಗಿದ್ದರು. ಹಾಗಾಗಿ 2015ರ ಜು.15ರಂದು ಬಜಪೆಯ ಮಹಿಳೆಯೋರ್ವರ ಪರಿಚಯದ ಮೂಲಕ ಸೌದಿ ಅರೇಬಿಯಾಕ್ಕೆ ಮನೆಗೆಲಸದ ಉದ್ಯೋಗಕ್ಕೆಂದು ಅವರು ತೆರಳಿದ್ದರು. ಕೆಲವು ತಿಂಗಳು ಮಾತ್ರ ಫೋನ್‌ ಸಂಪರ್ಕದಲ್ಲಿದ್ದ ವಿಜಯಾ ಅನಂತರದ ದಿನಗಳಲ್ಲಿ ಅಪರೂಪಕ್ಕೊಮ್ಮೆ ಮಾತ್ರ ಸಂಪರ್ಕಕ್ಕೆ ಸಿಗುತ್ತಿದ್ದರು. ಯಾವಾಗಲಾದರೊಮ್ಮೆ ಹಣ ಕಳುಹಿಸಿ ಕೊಡುತ್ತಿದ್ದರು.

ಎರಡು ವರ್ಷಗಳ ಬಳಿಕ ಪತಿಗೆ ವಿಪರೀತ ಅನಾರೋಗ್ಯದ ಕಾರಣ ಊರಿಗೆ ಮರಳಲು ಬಯಸಿದ ವಿಜಯಾ ಅವರಿಗೆ ಸೌದಿ ಪ್ರಾಯೋಜಕರು ಸ್ಪಂದನೆ ನೀಡಿಲ್ಲ ವಿಶೇಷವೆಂದರೆ ಇದುವರೆಗೆ ವಿಜಯಾ ಅವರಿಗೆ ಒಂದು ಮೊಬೈಲ್‌ ಫೋನ್‌ ಸೌಲಭ್ಯವನ್ನೂ ಪ್ರಾಯೋಜಕರು ಒದಗಿಸಿಲ್ಲ.ಹಾಗಾಗಿ ವಿಜಯಾ ಅವರ ಪರಿಸ್ಥಿತಿ ತಿಳಿಯಲು ಅನಕ್ಷರಸ್ಥ ಬಾಲಕೃಷ್ಣ ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ಬಾಲಕೃಷ್ಣ ಅವರು ಊರಿನ ಪರಿಚಯದವರಿಗೆ ಈ ವಿಚಾರವನ್ನು ತಿಳಿಸಿದ್ದರು. ಮಾಹಿತಿ ಪಡೆದ ಎಸ್‌ಡಿಪಿಐ ಪಕ್ಷದ ರಿಯಾಜ್‌ ಫರಂಗಿಪೇಟೆ ಅವರು ಸೌದಿ ಅರೇಬಿಯಾದಲ್ಲಿರುವ ಕರಾವಳಿಯ ಯುವಕರಿಗೆ ಮಾಹಿತಿ ನೀಡಿದ್ದು, ಅನಿವಾಸಿ ಭಾರತೀಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಇಂಡಿಯನ್‌ ಸೋಶಿಯಲ್‌ ಫೋರಮ್‌ (ಐ.ಎಸ್‌.ಎಫ್‌.) ವಿಜಯಾ ಪ್ರಕರಣವನ್ನು ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ ತಂದಿತ್ತು. ವಿಜಯಾ ಅವರನ್ನು ಪತ್ತೆ ಮಾಡಿದ ಐ.ಎಸ್‌.ಎಫ್‌. ಸಂಘಟನೆಯು ಸೌದಿ ಕಾರ್ಮಿಕ ನ್ಯಾಯಾಲಯದಲ್ಲಿ ದೂರನ್ನೂ ದಾಖಲಿಸಿತು.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ರಿಯಾಜ್‌ ಅವರು ಐ.ಎಸ್‌.ಎಫ್‌.ಗೆ ತಲುಪಿಸಿದ್ದು, ಶೀಘ್ರದಲ್ಲೇ ವಿಜಯಾ ಅವರು ತವರಿಗೆ ಮರಳುವಂತಾಗಬಹುದು ಎಂಬ ವಿಶ್ವಾಸವನ್ನು ಐ.ಎಸ್‌.ಎಫ್‌ ಫೋರಂ ವ್ಯಕ್ತಪಡಿಸಿದೆ.

ಎಸ್‌ಡಿಪಿಐ ನಿಯೋಗ ಸಂತ್ರಸ್ತ ಮಹಿಳೆಯ ಪತಿ ಬಾಲಕೃಷ್ಣ ಅವರನ್ನು ವಾಮಂಜೂರಿನ ಅವರ ಮನೆಯಲ್ಲಿ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಪ್ರ. ಕಾರ್ಯದರ್ಶಿ ಎ.ಎಂ. ಅತವುಲ್ಲಾ ಅವರ ನೇತೃತ್ವದ ನಿಯೋಗ ಸೋಮವಾರ ಭೇಟಿ ಮಾಡಿತು.

ನಿಯೋಗದಲ್ಲಿ ನೂರುಲ್ಲಾ ಕುಳಾç, ನಾಸೀರ್‌ ಉಳಾçಬೆಟ್ಟು, ಇಕ್ಬಾಲ್‌ ವಾಮಂಜೂರು, ಇಂಡಿಯನ್‌ ಸೋಶಿಯಲ್‌ ಫೋರಂನ ಸಲೀಂ ಗುರುವಾಯನಕೆರೆ ಹಾಗೂ ನಿಯಾಜ್‌ ಅಡೂರು ಉಪಸ್ಥಿತರಿದ್ದರು. ಕೋದಂಡರಾಮ ಸಾಲಿಯಾನ್‌ ಭೇಟಿ ನೀಡಿದ ಎಸ್‌ಡಿಪಿಐ ನಿಯೋಗದೊಂದಿಗೆ ಸಹಕರಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English