- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹೊಸ ಪ್ರಯೋಗಕ್ಕೆ ಚಿಂತನೆ ನಡೆಸಲಾಗಿದೆ : ರಾಜೆಂದ್ರಕುಮಾರ್

puttur [1]ಪುತ್ತೂರು: ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದು, ಈ ನಿಟ್ಟಿನಲ್ಲಿ ಕಸವನ್ನು ಮರುಬಳಕೆ ಮಾಡಿ ಅದರಿಂದ ಸಾವಯವ ಗೊಬ್ಬರ ಸೇರಿದಂತೆ ಮರಬಳಕೆ ಮಾಡುವ ಹೊಸದೊಂದು ಪ್ರಯೋಗಕ್ಕೆ ಸಹಕಾರಿ ಸಂಘ ಚಿಂತನೆ ನಡೆಸಿದ್ದು, ಇದಕ್ಕಾಗಿ ಸರ್ಕಾರದ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೆಂದ್ರಕುಮಾರ್ ಅವರು ಹೇಳಿದರು. ತಾಲ್ಲೂಕಿನ ನರಿಮೊಗರು ಕೃಷಿಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಸ್ವಚ್ಛ ಭಾರತದ ಕಲ್ಪನೆಯ ಕನಸು ನನಸಾಗುವುದಕ್ಕೆ ಅಡ್ಡಿಯಾಗುತ್ತಿದೆ. ರಾಜ್ಯದ ರಾಜಧಾನಿಯಲ್ಲಿ ದಿನವೊಂದಕ್ಕೆ 4ಸಾವಿರ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹೊಸ ಪ್ರಯೋಗಕ್ಕೆ ಚಿಂತನೆ ನಡೆಸಲಾಗಿದೆ ಎಂದರು.

ನೆರೆಯ ಜಿಲ್ಲೆ ಅಥವಾ ನೆರೆ ರಾಜ್ಯಗಳಿಂದ ಆಹಾರೋತ್ಪನ್ನವನ್ನು ಖರೀದಿ ಮಾಡುವ ಮೂಲಕ ಜಿಲ್ಲೆಯಲ್ಲಿ ಮಾರಾಟ ಮಾಡುವ ವ್ಯವಸ್ಥೆ ಹಾಗೂ ಅಡಿಕೆಯನ್ನು ದಾಸ್ತಾನಿರಿಸುವ ಆಧುನಿಕ ತಂತ್ರಜ್ಞಾನದ ಬೃಹತ್ ಕೋಲ್ಡ್ ಸ್ಟೋರೇಜ್ ಘಟಕವನ್ನು ಸ್ಥಾಪಿಸುವ ಉದ್ದೇಶ ಇದೆ ಎಂದು ಅವರು ತಿಳಿಸಿದರು.

ನೂತನ ಗೋದಾಮು ಉದ್ಘಾಟಿಸಿದ ಸಂಸದ ನಳಿನ್‍ಕುಮಾರ್ ಕಟೀಲು ಮಾತನಾಡಿ, ‘ದೇಶಕ್ಕೆ ಸಹಕಾರಿ ಮುತ್ಸದ್ದಿಗಳನ್ನು ನೀಡಿದ ಕೀರ್ತಿ ಜಿಲ್ಲೆಗಿದೆ. ಗ್ರಾಮೀಣ ಯುವಕರಲ್ಲಿ ನಾಯಕತ್ವ ಗುಣ, ಪಾರದರ್ಶಕ ಆಡಳಿತ ವ್ಯವಸ್ಥೆಯ ಮಾದರಿಯನ್ನು ಪರಿಚಯಿಸುವ ಮೂಲಕ ಸಹಕಾರಿ ಸಂಘ ಪ್ರಸ್ತುತ ಜಿಲ್ಲೆಯ ಜನರ ನರನಾಡಿಗಳಲ್ಲಿ ಸೇರಿಕೊಂಡಿದೆ ಎಂದರು

ಜನರ ಸಮಸ್ಯೆಗೆ ಸ್ಪಂದಿಸುವ ಮಾಡುವ ಮೂಲಕ ಜಿಲ್ಲೆಯ ಸಹಕಾರಿ ಸಂಘ ಇಂದು ದೇಶದಲ್ಲೇ ಮಾದರಿಯಾಗಿದ್ದು, ಪುತ್ತೂರು , ಬೆಳ್ತಂಗಡಿ , ಸುಳ್ಯ ವ್ಯಾಪ್ತಿಯಲ್ಲಿ 2ಸಾವಿರ ಎಕರೆ ಪ್ರದೇಶದಲ್ಲಿ ಎಸ್‍ಇಝೆಡ್ ಯೋಜನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ‘ಸಹಕಾರಿ ಸಂಘದ ಮೂಲಕ ಜನರ ಸೇವೆ ಮಾಡುವುದು ಅತ್ಯಂತ ಶ್ರೇಷ್ಠ ಕೆಲಸವಾಗಿದ್ದು, ಜಿಲ್ಲೆಯಲ್ಲಿ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದ ಮಹಾನುಭಾವರು ಸಹಕಾರಿ ಕ್ಷೇತ್ರದಿಂದಲೇ ಮೇಲೆ ಬಂದವರು. ಜಿಲ್ಲೆಯ ಜನರಿಗೆ ಸಹಕಾರಿ ಸಂಘ ಅನಿವಾರ್ಯ ಎಂಬಂತಾಗಿದೆ, ಕೃಷಿಕರ ಸಮಸ್ಯೆಗಳಿಗೆ ತಕ್ಷಣದ ಸ್ಪಂದನೆ ಸೇರಿದಂತೆ ಅನೇಕ ರೀತಿಯ ರೈತಪರ ಅಭಿವೃದ್ದಿ ಕೆಲಸವನ್ನು ಮಾಡುವ ಮೂಲಕ ಸಹಕಾರಿ ಸಂಘ ದಿನೇ ದಿನೇ ಅಭಿವೃದ್ದಿಪಥದತ್ತ ಸಾಗುತ್ತಿದೆ’ ಎಂದರು.

ಜಗತ್ಪಾಲ ಅರಿಗ ಕೈಪಂಗಳ ಮತ್ತು ಹಿರಿಯ ಸದಸ್ಯರಾದ ಚಂದ್ರಶೇಖರ ಕೆ.ಎಸ್. ಅವರನ್ನು ಗೌರವಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ, ನರಿಮೊಗರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ, ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಡಿಸಿ ಬ್ಯಾಂಕ್ ನಿರ್ದೇಶಕರಾದ ಎಸ್. ಬಿ ಜಯರಾಮ ರೈ ಬಳೆಜ್ಜ, ಶಶಿಕುಮಾರ್ ರೈ ಬಾಲ್ಯೊಟ್ಟು, ಉದ್ಯಮಿ ಸತ್ಯಶಂಕರ್, ನಬಾರ್ಡ್ ಮೆನೇಜರ್ ಎಸ್ ರಮೇಶ್, ಕ್ಯಾಂಪ್ಕೋ ಸಂಸ್ಥೆಯ ನಿದೇರ್ಶಕ ಚನಿಲ ತಿಮ್ಮಪ್ಪ ಶೆಟ್ಟಿ ಇದ್ದರು.

ಸಂಘದ ಅಧ್ಯಕ್ಷ ಬಾಬು ಶೆಟ್ಟಿ ವೀರಮಂಗಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ ವಂದಿಸಿದರು. ಶಶಿಧರ್ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು.
ದೇಶದಲ್ಲಿ ಶೇ 100 ರೈತರ ಸಾಲವಸೂಲಾತಿ ನಡೆಯುವುದು ದ ಕ ಜಿಲ್ಲೆಯಲ್ಲಿ ಮಾತ್ರ.ಜಿಲ್ಲೆಯ ಜನರು ಪ್ರಾಮಾಣಿಕರು ಎಂಬುದು ಸಾಭೀತಾಗಿದೆ.