- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಘವೇಂದ್ರ ರಾವ್‌ ಅವರಿಗೆ ಸಮ್ಮಾನ

raghavendra [1]ಮಂಗಳೂರು : ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರಿಂದ ಕಾಂಗ್ರೆಸ್‌ ಮುಕ್ತ ಭಾರತವನ್ನು ಮಾಡಲು ಸಾಧ್ಯ ವಿಲ್ಲ. ನಾವು ನಿಮ್ಮೊಂದಿಗಿದ್ದೇವೆ ಎಂಬುದನ್ನು ಮತದಾರರು ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ತೋರಿಸಿದ್ದಾರೆ. ಬಲಿಷ್ಠ ಕಾರ್ಯಕರ್ತರ ಪಕ್ಷ ನಮ್ಮದಾಗಿದೆ ಎಂದು ಶಾಸಕ ಮೊಯಿದಿನ್‌ ಬಾವಾ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ನ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಎಪಿಎಂಪಿಸಿಯ ಮಾಜಿ ಸದಸ್ಯ ವೈ.ರಾಘವೇಂದ್ರ ರಾವ್‌ ಅವರನ್ನು ಸಮ್ಮಾನಿಸಿ ಅವರು ಮಾತನಾಡಿದರು.ಮುಂದಿನ ದಿನಗಳಲ್ಲಿ ಮೋದಿ ಹಾಗೂ ಕರ್ನಾಟಕದಲ್ಲಿ ಯಡಿಯೂರಪ್ಪ ಮುಕ್ತ ಭಾರತ ಹಾಗೂ ಆಡಳಿತವನ್ನು ಹೊಂದುವುದು ಕಾಂಗ್ರೆಸ್‌ ಗುರಿಯಾಗಲಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಫ್ಯಾಸಿಸ್ಟ್‌ ಮಾದರಿಯ ಆಡಳಿತ ನಡೆಸುತ್ತಿದ್ದು, ಇದು ದೇಶದ ಪ್ರಜಾಪ್ರಭುತ್ವ ಮಾದರಿಗೆ ಗಂಡಾತರವಾಗಿದೆ. ಸಮಯ ಸಾಧಕತನದಲ್ಲಿಯೂ ಬಿಜೆಪಿ ತನ್ನ ನೈತಿಕತೆಯನ್ನು ಮೀರಿ ವರ್ತಿಸುತ್ತಿದೆ. ಜನಪರ ಯೋಜನೆ ಜಾರಿ ಮಾಡುತ್ತೇವೆ, ಭ್ರಷ್ಟಾಚಾರದ ಹಣ ತರುತ್ತೇವೆ ಎಂದೆಲ್ಲ ವಾಗ್ಧಾನ ಮಾಡಿದ ಮೋದಿಯವರು ಇಂದು ಆಡಿದ ಮಾತನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿ ಬಂದ ಬಿ.ಎಸ್‌.ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಜನಪರ ಕಾಳಜಿಯುಳ್ಳ ಸಿದ್ದರಾಮಯ್ಯ ಸರಕಾರದ ವಿರುದ್ಧ ದಾಖಲೆ ರಹಿತ ಆರೋಪ ಮಾಡುತ್ತಿದ್ದಾರೆ. ಕೇವಲ ಒಂದೆರಡು ಕೇಸುಗಳಲ್ಲಿ ಖುಲಾಸೆಗೊಂಡರೂ ಇನ್ನೂ ಹತ್ತಿಪ್ಪತ್ತು ಕೇಸುಗಳು ತನಿಖಾ ಹಂತದಲ್ಲಿವೆ. ಹೀಗಾಗಿ ಯಡಿಯೂರಪ್ಪ ಆಡಳಿತದ ಕನಸು ನನಸಾಗದು. ಸಿದ್ದರಾಮಯ್ಯ ನೇತೃತ್ವದ ಸರಕಾರ ಮತ್ತೆ ಆಡಳಿತಕ್ಕೆ ಬರುವುದು ನಿಶ್ಚಿತ ಎಂದರು.

ರಾಜ್ಯದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರಿಗೆ ಅವರ ಪರಿಶ್ರಮ ಗುರುತಿಸಿ ಹುದ್ದೆ ನೀಡುವ ಮೂಲಕ ಅವರನ್ನು ಗುರುತಿಸುವ ಕೆಲಸ ಮಾಡುತ್ತಿದೆ. ವೈ. ರಾಘವೇಂದ್ರ ರಾವ್‌ ಹೊಸಬೆಟ್ಟು ವಾರ್ಡ್‌ನಲ್ಲಿ ಅಧ್ಯಕ್ಷರಾಗಿದ್ದಾಗ ಪಕ್ಷ ಬಲಪಡಿಸಲು ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದಾರೆ ಎಂದರು. ಮುಖಂಡರಾದ ಜಲೀಲ್‌, ಮಂಗಳೂರು ಬಾವಾ, ಹರೀಶ್‌ ಬಂಗೇರ, ಲಕ್ಷ್ಮಣ ಸುವರ್ಣ, ರಾಜ ಮತ್ತಿತರರು ಉಪಸ್ಥಿತರಿದ್ದರು.