- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಡಾ| ಮನಮೋಹನ್ ಅತ್ತಾವರರವರ ನಿಧನಕ್ಕೆ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಸಂತಾಪ

manmohan-attavar [1]ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಕೃಷಿ ಸಂಶೋಧಕ, ಸಾಧಕ ಡಾ| ಮನಮೋಹನ್ ಅತ್ತಾವರ ಇವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್‌ನ ಸ್ಠಾಪಕಾಧ್ಯಕ್ಷರಾದ ಡಾ| ಮನಮೋಹನ್ ಅತ್ತಾವರರವರ ಮಗ ಶ್ರೀ ಸಂತೋಷ್ ಅತ್ತಾವರರವರಿಗೆ ಬರೆದ ಪತ್ರದಲ್ಲಿ ಸಂತಾಪ ಸೂಚಿಸಿದ್ದಾರೆ. ಶ್ರೀ ಅತ್ತಾವರರವರು ತನ್ನ ಕೊನೆಯ ಉಸಿರಿರುವವರೆಗೂ ಸಂಶೋಧನಾ ವಿದ್ಯಾರ್ಥಿಯಾಗಿ ದುಡಿಯುತ್ತಿದ್ದರು.

ಹಾಗಿದ್ದರೂ ಅವರ ಹೃದಯ ಸದಾ ಕೃಷಿಕರ ಪರವಾಗಿ ತುಡಿಯುತ್ತಿತ್ತು. ತಮ್ಮ ಎಲ್ಲ ಸಂಶೋಧನೆಗಳನ್ನು ರೈತರ ಕೃಷಿಯಲ್ಲಿ ಅಳವಡಿಸಿವಲ್ಲಿ ಅವರು ಯಶಸ್ಸು ಪಡೆದಿದ್ದರು. ಅಂಗಾಂಶ ಬಾಳೆ ಕೃಷಿ, ಅಧಿಕ ಇಳಿವರಿ ಬೀಜಗಳ ಸಂಶೋಧನೆಗಳಿಂದ ಡಾ| ಅತ್ತಾವರರವರು ಸದಾ ಕಾಲ ಸ್ಮರಣೆಯಲ್ಲಿರುತ್ತಾರೆ.

ಅವರ ಸಂಶೋಧನೆ ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗಿರದೇ, ರೈತರ ಮನೆ ಬಾಗಿಲಿಗೆ ಹೋಗುವಂತದ್ದೇ ಆಗಿತ್ತು. ಕೃಷಿ ಕ್ಷೇತ್ರವು ನಷ್ಟವನ್ನು ಅನುಭವಿಸಿ, ಈ ಕ್ಷೇತ್ರಕ್ಕೆ ಬಂಡವಾಳವೇ ಬರದಂತಹ ದಿನಗಳಲ್ಲಿ ಡಾ| ಅತ್ತಾವರರವರು ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಖಾಸಗಿ ಬಂಡವಾಳವನ್ನು ತೊಡಗಿಸುವಂತೆ ಮಾಡಿದರು. ಈ ಸಾಹಸದಿಂದಾಗಿ ಕೃಷಿ ಕ್ಷೇತ್ರದಲ್ಲಿ ನವೋತ್ಸಾಹ ಮೂಡಿತಲ್ಲದೇ ಇದಕ್ಕೆ ಅಗತ್ಯವಿರುವ ಬಂಡವಾಳದ ಹರಿವು ಸಾಧ್ಯವಾಯಿತು.

ಡಾ| ಅತ್ತಾವರರವರು ತಮ್ಮ ಬುದ್ಧಿವಂತಿಕೆಯಿಂದ ಕೃಷಿ ತಂತ್ರಜ್ಞಾನವನ್ನು ಸುಸ್ಥಿರವಾಗಿ ರೈತರ ಮನೆ ಬಾಗಿಲಿಗೆ ಮುಟ್ಟಿಸುವ ಕನಸನ್ನು ನನಸು ಮಾಡಿದ್ದಾರೆ. ಡಾ| ಮನಮೋಹನ್ ಅತ್ತಾವರರವರು ಬಹಳಷ್ಟು ಉತ್ಸಾಹಿಗಳಾಗಿದ್ದು, ಕ್ರಿಯಾಶೀಲರಾಗಿದ್ದರು.

ಇತ್ತೀಚೆಗಷ್ಟೇ ಕಾರ್ಕಳದಲ್ಲಿ ಅವರ ಸಂಸ್ಥೆಯಿಂದ ಸಂಶೋಧಿಸಲ್ಪಟ್ಟ ಭತ್ತದ ಬೀಜಗಳ ನಾಟಿ ಮಾಡಿಸುವಲ್ಲಿ ಅವರು ತೋರಿಸಿದ ಉತ್ಸಾಹವನ್ನು ಕಂಡು ಬೆರಗಾಗಿದ್ದೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಾರ ಅಭಿಮಾನಿಗಳಾಗಿದ್ದ ಅವರು ನನ್ನ ಸ್ನೇಹಿತರೂ ಆಗಿದ್ದು, ಶ್ರೇಷ್ಠ ಮಾನವ ಗುಣಗಳನ್ನು ಹೊಂದಿದ್ದರು. ಇವರ ನಿಧನ ವೈಯಕ್ತಿಕವಾಗಿ ತನಗೂ ಆದ ನಷ್ಟ ಎಂದು ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.

ಈ ಸಂದರ್ಭ ಡಾ. ಮನಮೋಹನ್ ಅತ್ತಾವರರವರು ಸ್ಥಾಪಿಸಿದ ಮಾತೃ ಸಂಸ್ಥೆ ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್‌ನ ಚುಕ್ಕಾಣಿ ಹಿಡಿದಿರುವ ಶ್ರೀ ಸಂತೋಷ್ ಅತ್ತಾವರರವರಿಗೆ ಶುಭ ಕೋರಿದ್ದಲ್ಲದೇ, ಡಾ| ಮನಮೋಹನ್ ಅತ್ತಾವರರವರ ಆತ್ಮಕ್ಕೆ ಶಾಂತಿಯನ್ನು ಕೋರಿದ್ದಾರೆ. ಅವರ ಕುಟುಂಬ ವರ್ಗ ಮತ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಸಂತಾಪ ಸೂಚಿಸಿರುತ್ತಾರೆ.