- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು-ಲಕ್ಷ ದ್ವೀಪ ಪ್ರವಾಸೋದ್ಯಮ ಅಭಿವೃದ್ಧಿಗಿದು ಸಕಾಲ

lakshdweep [1]ಮಂಗಳೂರು: ಲಕ್ಷದ್ವೀಪ ಪ್ರವಾಸಿಗರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಕಾಶವೊಂದು ಈಗ ಲಭಿಸಿದೆ. ಲಕ್ಷದ್ವೀಪದಲ್ಲಿ ಒಖೀ ಚಂಡಮಾರುತದ ಹಾನಿಯನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ, ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳ ಬಗ್ಗೆ ಪರಿಸರ ಮತ್ತು ಅರಣ್ಯ ವಿಭಾಗದ ಮುಖ್ಯ ಕಾರ್ಯದರ್ಶಿ ಎ.ಟಿ. ದಾಮೋದರ್‌ ಪ್ರಧಾನಿಗೆ ವಿವರಿಸಿದ್ದಾರೆ.

ಈ ವೇಳೆ ಲಕ್ಷದ್ವೀಪಕ್ಕೆ ಸಂಬಂಧಿಸಿ ಪ್ರವಾಸೋದ್ಯಮ ಆಡಳಿತಾತ್ಮಕ ಮತು ಪ್ರವಾಸೋದ್ಯಮ ನಿಯಂತ್ರಣ ಕಚೇರಿಯನ್ನು ಮಂಗಳೂರಿನಲ್ಲಿ ಸ್ಥಾಪಿಸುವ ವಿಚಾರವೂ ಚರ್ಚೆಗೆ ಬಂದಿದೆ. ಇದನ್ನು ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟು ಕೇಂದ್ರ ಸರಕಾರದಿಂದ ಅನುಮತಿ ದೊರಕಿಸುವ ಕಾರ್ಯ ಈಗ ಆಗಬೇಕಿದೆ. ಉತ್ತರ ಕನ್ನಡ ಜಿಲ್ಲೆಯವರಾದ ದಾಮೋದರ್‌ ಲಕ್ಷದ್ವೀಪ ಪ್ರವಾಸೋದ್ಯಮ ವಿಭಾಗದ ಹೊಣೆ ಹೊತ್ತಿದ್ದು, ಆಸಕ್ತಿವಹಿಸಿಪುವ ಕಾರಣ ತ್ವರಿತವಾಗಿ ಅನುಷ್ಠಾನಕ್ಕೆ ಬರುವ ನಿರೀಕ್ಷೆಯೂ ವ್ಯಕ್ತವಾಗಿದೆ.

ಲಕ್ಷದ್ವೀಪ ನಿರ್ಬಂಧಿತ ಪ್ರದೇಶ. ಹೊರಗಿನವರ ಪ್ರವೇಶಕ್ಕೆ ಕೊಚ್ಚಿಯಲ್ಲಿ ಲಕ್ಷದ್ವೀಪ ಸೆಕ್ರಟೇರಿಯೇಟ್‌ ನೀಡುವ ಅನುಮತಿ ಪತ್ರ ಬೇಕು. ಕರ್ನಾಟಕದ ಪ್ರವಾಸಿಗರೂ ಕೊಚ್ಚಿ ಕಚೇರಿ ಯನ್ನು ಸಂಪರ್ಕಿಸಬೇಕು. ಇದು ಲಕ್ಷದ್ವೀಪ ಪ್ರವಾಸಕ್ಕೆ ಬಹುದೊಡ್ಡ ಅಡಚಣೆಯಾಗಿದೆ.

ಕಡಿಮೆ ಖರ್ಚಿನಲ್ಲಿ ಸಾಗರ ಪ್ರಯಾಣದೊಂದಿಗೆ ಪ್ರಕೃತಿಯ ಸೊಬಗನ್ನು ಸವಿಯುವ ಅವಕಾಶವಿರುವ ಅಪೂರ್ವ ತಾಣ ಲಕ್ಷದ್ವೀಪ. ಮಂಗಳೂರಿನ ತೀರ ಸನಿಹದಲ್ಲಿದೆ. ಕರ್ನಾಟಕ ಸರಕಾರದ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಲಕ್ಷ ದ್ವೀಪ ಪ್ರಯಾಣಕ್ಕೆ ಕೊಚ್ಚಿಯನ್ನೇ ನೆಚ್ಚಿಕೊಳ್ಳಬೇಕಾಗಿದೆ. ಅಲ್ಲದೆ, ಮಂಗಳೂರು ಹಳೇ ವಾಣಿಜ್ಯ ಬಂದರು ಧಕ್ಕೆಯಲ್ಲಿ ಮೂಲಸೌಲಭ್ಯಗಳ ಕೊರತೆಯಿಂದಾಗಿ ಪ್ರಯಾಣಿಕ ನೌಕೆಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿವೆ.

ಮಂಗಳೂರಿನಿಂದ ಸುಮಾರು 365 ಕಿ.ಮೀ. (277 ಮೈಲು) ದೂರದಲ್ಲಿ ಲಕ್ಷ ದ್ವೀಪ ಸಮೂಹವಿದೆ. ಕವರೆಟ್ಟಿ, ಅಗಾಟ್ಟಿ,ಕಲ್ಪೆನಿ, ಮಿನಿಕ್ವಾಯ್‌, ಅಮಿನಿ, ಚತ್ತಲತ್‌, ಕಿಲ್ತಾನ್‌ ಹಾಗೂ ಬಿತ್ತಾ, ಅಂದ್ರೋತ್‌, ಕಡ ಮಟ್ಟ್ ಪ್ರಮುಖ ದ್ವೀಪಗಳು. ಕ್ರೂಜ್‌ನಲ್ಲಿ ಸುಮಾರು 16ರಿಂದ 18 ತಾಸುಗಳ ಪ್ರಯಾಣ. ಸಾಗರ ಪ್ರಯಾಣವಾಗಿದ್ದು, ಕಡಿಮೆ ಪ್ರಯಾಣ ದರವೂ ಇರುವ ಕಾರಣ ತಮ್ಮ ಬಜೆಟ್‌ನೊಳಗೆ ಪ್ರವಾಸ ಮುಗಿಸಲು ಅನುಕೂಲವಾಗುತ್ತದೆ.

ಮಂಗಳೂರು ಹಾಗೂ ಲಕ್ಷದ್ವೀಪದ ನಡುವೆ ಹೆಚ್ಚಿನ ವಾಣಿಜ್ಯ ವ್ಯವಹಾರ ನಡೆಯುವ ನಿಟ್ಟಿನಲ್ಲಿ ಲಕ್ಷದ್ವೀಪ ಆಡಳಿತದ ನೆರವಿನೊಂದಿಗೆ ಮಂಗಳೂರು ಹಳೇ ಬಂದರಿನಲ್ಲಿ ಪ್ರತ್ಯೇಕ ಜೆಟ್ಟಿ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಲಕ್ಷದ್ವೀಪದ ಕೋರಿಕೆಗೆ ಸ್ಪಂದಿಸಿ ಕರ್ನಾಟಕ ಬಂದರು ಇಲಾಖೆಯು ಮಂಗಳೂರು ಹಳೇ ಬಂದರಿನಲ್ಲಿ ಸುಮಾರು 8000 ಚ.ಮೀ. ವಿಸ್ತೀರ್ಣ ಜಾಗವನ್ನು ಸರಕು ಹಾಗೂ ಆಹಾರ ಸಾಮಗ್ರಿಗಳನ್ನು ಸಾಗಿಸುವ ಉದ್ದೇಶಕ್ಕಾಗಿ ನೀಡುತ್ತಿದೆ.

ಲಕ್ಷದ್ವೀಪ ಆಡಳಿತ ಮತ್ತು ಕರ್ನಾಟಕ ಸರಕಾರದ ಬಂದರು ಸಚಿವಾಲಯದ ಜತೆ ಭೂಮಿ ನೀಡುವ ಒಡಂಬಡಿಕೆಗೆ ಸಹಿ ಮಾಡ ಲಾಗಿದೆ. 65 ಕೋಟಿ ರೂ. ವೆಚ್ಚದ ಈ ಯೋಜನೆ ಲಕ್ಷದ್ವೀಪ ಜೆಟ್ಟಿಯಲ್ಲಿ ದೊಡ್ಡ ನೌಕೆಗಳು ತಂಗಲು ಪೂರಕವಾಗಿ ಸುಸಜ್ಜಿತ ಬರ್ತ್‌, ಪ್ರಯಾಣಿಕರಿಗೆ ತಂಗುದಾಣ, ಸರಕು ಸಂಗ್ರಹಣೆಗಾಗಿ ಗೋದಾಮು ನಿರ್ಮಾಣವನ್ನು ಒಳ ಗೊಂಡಿದೆ.

ಲಕ್ಷದೀಪ ಆಡಳಿತದ ಒಂದು ಅಂಗ ಸಂಸ್ಥೆಯಾಗಿರುವ ಸೊಸೈಟಿ ಫಾರ್‌ ಪ್ರಮೋಶನ್‌ ಆಫ್‌ ನೇಚರ್‌ ಟೂರಿಸ್ಟ್‌ ಆ್ಯಂಡ್‌ ನ್ಪೋರ್ಟ್ಸ್ ವತಿಯಿಂದ ಹಳೇ ಬಂದರು ಪ್ರದೇಶದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಅತಿಥಿ ಗೃಹ ನಿರ್ಮಾಣ ಮಾಡಲು ಉದ್ದೇಶಿಸಿದೆ.

ಯೋಜನೆ ಶೀಘ್ರ ಅನುಷ್ಠಾನಗೊಳ್ಳುವ ನಿಟ್ಟಿನಲ್ಲಿ ಮಂಗ ಳೂರು ಶಾಸಕ ಜೆ.ಆರ್‌. ಲೋಬೋ ಅವರು ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಆಡಳಿತದೊಂದಿಗೆ ಮಾತುಕತೆಯನ್ನೂ ನಡೆಸಿದ್ದಾರೆ.

ಲಕ್ಷದ್ವೀಪದೊಂದಿಗೆ ಶತಮಾನಗಳಿಂದ ವಾಣಿಜ್ಯ ಮತ್ತಿತರ ನಿಕಟ ಸಂಬಂಧವನ್ನು ಮಂಗಳೂರು ಹೊಂದಿದೆ. ಮಂಗಳೂರಿನ ಹಳೆ ಬಂದರಿನಲ್ಲಿ ಲಕ್ಷದ್ವೀಪಕ್ಕೆ ಸರಕುಗಳನ್ನು ಸಾಗಿಸುವ ವಾಣಿಜ್ಯ ದಕ್ಕೆ ಇದೆ. ಇಲ್ಲಿ ಲಕ್ಷದ್ವೀಪದಿಂದ ಬರುವ ನೌಕೆಗಳು ಲಂಗರು ಹಾಕಿ ಸರಕು ತುಂಸಿಕೊಂಡು ಹೋಗುತ್ತಿವೆ.

‘ಮಂಜಿ’ ನೌಕೆಗಳ ಮೂಲಕ ವ್ಯಾಪಾರಿಗಳು ಮಂಗಳೂರು ಹಳೇ ಬಂದರಿಗೆ ಆಗಮಿಸಿ ಇಲ್ಲಿಂದ ಲಕ್ಷದ್ವೀಪಕ್ಕೆ ಕಟ್ಟಡ ಸಾಮಗ್ರಿಗಳನು, ಸಂಬಾರು ಪದಾರ್ಥಗಳನ್ನು ಒಯ್ಯುತ್ತಾರೆ. ಇದರ ಜತೆಗೆ ಕೆಲವು ಬಾರಿ ಲಕ್ಷದ್ವೀಪದಿಂದ ಪ್ರಯಾಣಿಕರ ನೌಕೆಗಳು ಬರುತ್ತವೆ. ಆದರೆ, ಅವು ಸರಕು ನೌಕೆಗಳ ಪಕ್ಕದಲ್ಲೇ ನಿಲ್ಲಬೇಕಾಗುತ್ತದೆ. ಪ್ರಯಾಣಿಕರ ನೌಕೆಗಳಿಗೆ ಇಲ್ಲಿ ಪ್ರಾಶಸ್ತ್ಯ ಸಿಗುತ್ತಿಲ್ಲ.

ಪ್ರಯಾಣಿಕರಿಗೆ ಶುದ್ಧ ನೀರು ಮೂಲಸೌಕರ್ಯದ ಕೊರತೆಯೂ ಇದೆ. ದಕ್ಕೆಯಲ್ಲಿ ಸುಸಜ್ಜಿತ ಪ್ರಯಾಣಿಕರ ಲಾಂಜ್‌ ಇಲ್ಲದೆ ಸರಕುಗಳ ನಡುವೆಯೇ ವಿಶ್ರಾಂತಿ ಪಡೆಯಬೇಕು. ಪರವಾನಿಗೆ ವ್ಯವಸ್ಥೆಗೂ ಇಲ್ಲಿ ಕಚೇರಿಯಿಲ್ಲ ಎನ್ನುವುದು ಲಕ್ಷದ್ವೀಪದಿಂದ ಇಲ್ಲಿಗೆ ಬರುವ ಪ್ರಯಾಣಿಕರು ದೂರು. ಹೀಗಾಗಿ, ಲಕ್ಷದ್ವೀಪದಿಂದ ಬರುವ ಪ್ರಯಾಣಿಕರು ಕೊಚ್ಚಿಯನ್ನು ನೆಚ್ಚಿಕೊಳ್ಳುತ್ತಿದ್ದಾರೆ.