ಬಜಪೆ ಮಕ್ಕಳ ಗ್ರಾಮ ಸಭೆ

3:41 PM, Monday, December 25th, 2017
Share
1 Star2 Stars3 Stars4 Stars5 Stars
(No Ratings Yet)
Loading...

bajpe-villageಬಜಪೆ: ಸರಕಾರ ಕೇವಲ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಮಾತ್ರ ಸಮವಸ್ತ್ರ ನೀಡುತ್ತಿದೆ.ಅನುದಾನಿತ ಶಾಲೆಯಲ್ಲಿಯೂ ಬಡ ವಿದ್ಯಾರ್ಥಿಗಳು ಇದ್ದಾರೆ. ಶಿಕ್ಷಣ ಇಲಾಖೆ ಈ ಬಗ್ಗೆ ಗಮನಿಸಿ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರಗಳನ್ನು ಉಚಿತವಾಗಿ ನೀಡಬೇಕು.

ಗ್ರಾಮ ಪಂಚಾಯತ್‌ ಈ ಬಗ್ಗೆ ನಿರ್ಣಯ ಕೈಗೊಂಡು ಸರಕಾರಕ್ಕೆ ಮನವಿ ಮಾಡಬೇಕು ಎಂದು ಬಜಪೆ ಗ್ರಾಮ ಪಂಚಾಯತ್‌ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ಒತ್ತಾಯಿಸಿದರು.

ಬಜಪೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ 2017- 18ನೇ ಸಾಲಿನ ಮಕ್ಕಳ ಗ್ರಾಮ ಸಭೆಯು ಡಿ. 23ರಂದು ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಮಹಮದ್‌ ಶರೀಫ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನು ವಿವಿಧ ಶಾಲೆಯ ವಿದ್ಯಾರ್ಥಿ ಸಂಘದ ನಾಯಕರು ಉದ್ಘಾಟಿಸಿದರು.

ಬೆಳಗ್ಗೆ ವಿದ್ಯಾರ್ಥಿಗಳಿಂದ ಬಜಪೆ ಪೇಟೆಯಲ್ಲಿ ಮಕ್ಕಳ ಜಾಗೃತಿ ಜಾಥಾ ನಡೆಯಿತು. ಎಸೆಸೆಲ್ಸಿ ಪರೀಕ್ಷೆಗಳು ಈ ಬಾರಿ ಬೇಗ ಬರುತ್ತಿದೆ. ವಿದ್ಯುತ್‌ ಕಡಿತ ಮಾಡದಂತೆ ಮೆಸ್ಕಾಂ ಇಲಾಖೆಯನ್ನು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಒತ್ತಾಯಿಸಿದರು.

ಶನಿವಾರ ಬ್ಯಾಗ್‌ ರಹಿತ ದಿನ ಆಚರಿಸಲಾಗಿದೆ. ಮಕ್ಕಳು ಪುಸ್ತಕದ ಹೊರೆ ಕಡಿಮೆ ಮಾಡಲು ಜಿಲ್ಲಾದ್ಯಂತ ಈ ದಿನ ಆಚರಿಸಲಾಗಿದೆ. ಈ ದಿನದಲ್ಲಿ ಮಕ್ಕಳು ಪಠ್ಯಕ್ಕೆ ಸಂಬಂಧಿಸಿ ವಿಷಯಗಳ ಚರ್ಚೆ, ವಿವಿಧ ಚಟುವಟಿಕೆಗಳನ್ನು ಮಾಡಬೇಕಾಗಿದೆ. ಶಿಕ್ಷಕರಿಂದ ಒಳ್ಳೆಯ ಅಭಿಪ್ರಾಯವೂ ಬಂದಿದೆ ಎಂದು ಉಸ್ಮಾನ್‌ ಹೇಳಿದರು.

ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕಿ ಮೋಹಿನಿ ಮಾತನಾಡಿ, ಈ ಬಾರಿ ಡಿಪಿಟಿ ಚುಚ್ಚು ಮದ್ದು ಬಂದಿಲ್ಲ. ಇದರಿಂದ ಮಕ್ಕಳಿಗೆ ಚುಚ್ಚುಮದ್ದು ಕೊಟ್ಟಿಲ್ಲ. ಟಿಟಿಯನ್ನು ಶಾಲಾ ಮಕ್ಕಳಿಗೆ ನೀಡಲಾಗಿದೆ ಎಂದು ತಿಳಿಸಿದರು.

ಬಜಪೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೆಲವು ಅಂಗನವಾಡಿ ಕೇಂದ್ರದಲ್ಲಿ ಅರ್ಧ ಮೊಟ್ಟೆ ಮಾತ್ರ ಮಕ್ಕಳಿಗೆ ನೀಡಲಾಗುತ್ತದೆ. ಉಳಿದ ಅರ್ಧ ಮೊಟ್ಟೆ ಎಲ್ಲಿ ಹೋಗುತ್ತದೆ ಎಂದು ವಿಷಯ ಸಭೆಯಲ್ಲಿ ಚರ್ಚೆಗೆ ಬಂತು.

ಇದಕ್ಕೆ ಉತ್ತರಿಸಿದ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಚಂದ್ರಿಕಾ, ಮಕ್ಕಳಿಗೆ ಒಮ್ಮೆಲೇ ಒಂದು ಮೊಟ್ಟೆ ಕೊಟ್ಟರೆ ಹಿಡಿಯಲು ಕಷ್ಟ ವಾಗುತ್ತದೆ. ಅದು ಕೈಯಿಂದ ಜಾರಿ ಬೀಳುತ್ತದೆ. ಕೆಲವರು ಎಲ್ಲವನ್ನೂ ತಿನ್ನುವುದಿಲ್ಲ. ಅರ್ಧ ತಿಂದು ಬಿಸಾಡುತ್ತಾರೆ. ಇದಕ್ಕಾಗಿ ಮೊದಲು ಅರ್ಧ ಮೊಟ್ಟೆಯನ್ನು ಮಕ್ಕಳಿಗೆ ನೀಡಲಾಗುತ್ತದೆ. ಅದು ತಿಂದ ಬಳಿಕ ಇನ್ನೊಂದು ಅರ್ಧ ಮೊಟ್ಟೆಯನ್ನು ನೀಡಲಾಗುತ್ತದೆ ಎಂದರು.

ಮಕ್ಕಳು ಹಕ್ಕುಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮೂಡಬಿದಿರೆ ಆಳ್ವಾಸ್‌ ಪ್ರೌಢಶಾಲಾ ಮುಖ್ಯ ಶಿಕ್ಷಕ ವಸಂತ
ಕುಮಾರ್‌ ನಿಟ್ಟೆ ಮಾಹಿತಿ ನೀಡಿದರು. ಮಕ್ಕಳ ಬಗ್ಗೆ ಹೆತ್ತವರು ಮತ್ತು ಶಿಕ್ಷಕರು ಕಾಳಜಿ ವಹಿಸಬೇಕು ಎಂದು ಎಸ್‌ ಐಮದನ್‌ ಹೇಳಿದರು.

ತಾಲೂಕು ಪಂಚಾಯತ್‌ ಸದಸ್ಯೆ ಲತಾ ಸುವರ್ಣ, ಗ್ರಾಮ ಪಂಚಾಯತ್‌ ಸದಸ್ಯರಾದ ಸುರೇಂದ್ರ ಪೆರ್ಗಡೆ, ಸುಧಾಕರ ಕಾಮತ್‌, ಸಾಹುಲ್‌ ಹಮೀದ್‌, ಲೋಕೇಶ್‌ ಪೂಜಾರಿ, ಸುಮಾ ಶೆಟ್ಟಿ , ವೇದಾವತಿ, ಅಯಿಶಾ, ಯಶೋಧಾ, ಉದಯ, ನಝೀರ್‌ ಉಪಸ್ಥಿತರಿದ್ದರು.ಸಭೆಯನ್ನು ಪಿಡಿಒ ಸಾಯೀಶ್‌ ಚೌಟ ನಿರ್ವಹಿಸಿದರು.

ಗ್ರಾಮ ಲೆಕ್ಕಾಧಿಕಾರಿ ಕಿಶೋರ್‌ ಅವರು ಕಂದಾಯ ಇಲಾಖೆ ಮಾಹಿತಿ ನೀಡಿದರು. ಅ ಸಂದರ್ಭದಲ್ಲಿ ಮಕ್ಕಳು ಆಧಾರ್‌ ಕಾರ್ಡ್‌ ಇನ್ನೂ ಸರಿಪಡಿಸಿಲ್ಲ. ಇದಕ್ಕಾಗಿ ಮಂಗಳೂರಿಗೆ ಹೋಗಬೇಕಾಗಿದೆ ಎಂದು ತಮ್ಮ ಸಮಸ್ಯೆಯನ್ನು ಹೇಳಿದರು. ಅದಕ್ಕೆ ಉತ್ತರಿಸಿದ ಕಿಶೋರ್‌, ಈಗಾಗಲೇ ಶೇ. 94ರಷ್ಟು ಆಧಾರ್‌ ಕಾರ್ಡ್‌ ಅಗಿದೆ. ಕೇವಲ ಮೊಬೈಲ್‌ ನಂಬರ್‌ ಹಾಗೂ ವಿಳಾಸ ತಿದ್ದುಪಡಿ ಆಗಲು ಬಾಕಿ ಇದೆ. ಇದು ಅಂಚೆ ಕಚೇರಿಯಲ್ಲಿ ನಡೆಯುತ್ತಿದೆ. ಮುಂದೆ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ನಡೆಬಹುದು ಎಂದು ಹೇಳಿದರು.

ಬಜಪೆ ಪ್ರಾಥಮಿಕ ಆರೋಗ್ಯಕೇಂದ್ರ ಮೇಲ್ದೆರ್ಜೆಗೆ ಏರುವಲ್ಲಿ ಈಗಾಗಲೇ ಅದು ಚಾಲನೆಯಲ್ಲಿದೆ. ಅದರೆ ಸಿಬಂದಿಯ ಕೊರತೆ ಇಲ್ಲಿ ಈಗ ಇದೆ. ಕೇಂದ್ರದ ವ್ಯಾಪ್ತಿಯ ಅದ್ಯಪಾಡಿ, ಕಂದಾವರ,ಪಡುಪೆರಾರ ಉಪಕೇಂದ್ರಗಳಲ್ಲಿ ಸಿಬಂದಿ ಖಾಲಿ ಇದೆ. 2018 ಜ. 14ರಿಂದ 24ರವರೆಗೆ ಮನೆ ಮನೆಗೆ ಟಿಬಿಯ ಬಗ್ಗೆ ಸರ್ವೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದು ಬಜಪೆ ಪ್ರಾ. ಆ. ಕೇಂದ್ರದ ಮೇಲ್ವಿಚಾರಕಿ ಮೋಹಿನಿ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English