- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪರಿಸರ ನಿಯಂತ್ರಣ ಮಂಡಳಿಯ ಉಪ ಅಧಿಕಾರಿ ಲೋಕಾಯುಕ್ತ ಬಲೆಗೆ

Lokayukta Raid/ಲೋಕಾಯುಕ್ತ ಬಲೆಗೆ [1]

ಉಡುಪಿ: ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ರವಿಚಂದ್ರ ಕೆ. ಅವರು ಮಣಿಪಾಲದಲ್ಲಿ ಕೈಗಾರಿಕಾ ಘಟಕವನ್ನು ಸ್ಥಾಪನೆಯ ಪರವಾನಿಗೆಗೆ ಲಂಚ ಪಡೆಯುತ್ತಿದ್ದಾಗ ಉಡುಪಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ನಿಸರ್ಗ ಕೋಕನೆಟ್‌ ಇಂಡಸ್ಟ್ರೀಸ್‌ ಎಂಬ ಕೈಗಾರಿಕಾ ಘಟಕವನ್ನು ಸ್ಥಾಪನೆ ಮಾಡಲು ಕುಂದಾಪುರ ತಾಲೂಕು ಯೆಡ್ಯಾಡಿ-ಮತ್ಯಾಡಿ ಗ್ರಾಮದ ಗಣೇಶ್‌ ಆನಂದ ಅವರು ನಿರಾಕ್ಷೇಪಣಾ ಪತ್ರ ಕೋರಿ ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿರುವ ಪರಿಸರ ಮಾಲಿನ್ಯ ಅಧಿಕಾರಿಯವರಿಗೆ ಆ.12ರಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ರೂ.5,000 ಶುಲ್ಕ ಪಾವತಿಸಿದ್ದರು. ಪರಿಸರ ಮಾಲಿನ್ಯ ಅಧಿಕಾರಿ ಭಾಸ್ಕರ ಅವರು ನಿರಾಕ್ಷೇಪಣಾ ಪತ್ರ ನೀಡ ಬೇಕಾದಲ್ಲಿ ಮಂಗಳೂರಿನ ಅಧಿಕಾರಿಗಳಿಗೆ ಒಟ್ಟು 15,000 ರೂ. ಕೊಡಬೇಕು ಅದಕ್ಕಾಗಿ ಬಾಕಿ ಹಣ ಪಾವತಿಸಲು ಸೂಚಿಸಿದ್ದರು. ಹಣ ಕಡಿಮೆ ಮಾಡಲು ಹೇಳಿದಾಗ 12,000 ರೂ. ಮೊತ್ತವನ್ನು ತರಲು ಹೇಳಿದ್ದರು. ಗಣೇಶ್‌ ಆನಂದ ಅವರು ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡರು.

ಸೆ.8ರಂದು ರವಿಚಂದ್ರ ಕೆ. 12,000 ರೂ. ಮೊತ್ತವನ್ನು ತನ್ನ ಕಚೇರಿಯಲ್ಲಿ ಪಡೆದುಕೊಳ್ಳುತ್ತಿರುವಾಗ ಪೊಲೀಸ್‌ ನಿರೀಕ್ಷಕರಾದ ತಿಮ್ಮಯ್ಯ ಹಾಗೂ ಬಿ.ಪಿ. ದಿನೇಶ್‌ ಕುಮಾರ್‌ ಸಿಬಂದಿಯವರಾದ ರಾಮಚಂದ್ರ ಭಟ್‌, ದಿವಾಕರ ಶರ್ಮ, ಶೋಭಾ, ದಿವಾಕರ ಸುವರ್ಣ, ನಾಗೇಶ್‌ ಉಡುಪ, ಶ್ರೀಧರ ಜಿ, ಉಮೇಶ್‌, ರಿಯಾಜ್‌ ಅಹ್ಮದ್‌, ದಿನೇಶ್‌, ಅಶೋಕ, ಸಂತೋಷ, ಶಿವರಾಯ ಬಿಲ್ಲವ, ಲಕ್ಷ್ಮಿಧರ ಸೇಥಿ ಇವರ ಜೊತೆ ಸೇರಿ ಕಾರ್ಯಾಚರಣೆ ನಡೆಸಿ ಅಧಿಕಾರಿಯನ್ನು ಬಂಧಿಸಿದರು.

ಮಂಗಳೂರಿನ ಎಸ್ಪಿ ಡಿ.ಎಸ್‌. ಜಗಮಯ್ಯನವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಡಾ|ಪ್ರಭುದೇವ ಬಿ. ಮಾನೆ ದಾಳಿಯ ನೇತೃತ್ವವನ್ನು ವಹಿಸಿದ್ದರು. ಬಂಧಿತ ರವಿಚಂದ್ರ ಕೆ. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.