- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಇನ್ನೆರಡು ತಿಂಗಳಲ್ಲಿ ರಾಜ್ಯದಲ್ಲಿ ರಸ್ತೆಗೆ ಇಳಿಯಲಿವೆ ಎಲೆಕ್ಟ್ರಾನಿಕ್‌ ಬಸ್‌‌‌ಗಳು!

electric-bus [1]ಬೆಂಗಳೂರು: ಇನ್ನೆರಡು ತಿಂಗಳಲ್ಲಿ ರಾಜ್ಯದಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಾನಿಕ್ ಬಸ್‌‌‌ಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ ಎಂದು ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮೊದಲ ಹಂತವಾಗಿ ಬೆಂಗಳೂರು ನಗರದ ಕೆಲವು ಮಾರ್ಗ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಡಿ ಬೆಂಗಳೂರು-ಮೈಸೂರು, ಬೆಂಗಳೂರು-ತುಮಕೂರು-ಕೋಲಾರ ನಗರಗಳ ನಡುವೆ ಎಲೆಕ್ಟ್ರಾನಿಕ್ ಬಸ್ ಸಂಚಾರ ನಡೆಸಲಿವೆ ಎಂದರು.

ರಾಷ್ಟ್ರದಲ್ಲಿ ಮೊದಲಿಗೆ ಈ ಸೌಲಭ್ಯ ತರುತ್ತಿರುವ ರಾಜ್ಯ ಕರ್ನಾಟಕವಾಗಲಿದೆ. ಪ್ರತಿ ಬಸ್‍ಗೆ ಮೂರು ಕೋಟಿ ರೂ. ವೆಚ್ಚ ತಗಲುತ್ತಿದೆ. ಇಂತಹ 150 ಬಸ್‍ಗಳನ್ನು ಪ್ರಥಮ ಹಂತವಾಗಿ ಸಾರ್ವಜನಿಕ ಸೇವೆಗಾಗಿ ಸಂಚಾರಕ್ಕೆ ಬಿಡಲಾಗುವುದು ಎಂದು ಹೇಳಿದರು.

ಪರಿಸರ ರಕ್ಷಣೆ ಉದ್ದೇಶದಿಂದ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿಯನ್ನು ಬಳಕೆ ಮಾಡಿಕೊಂಡು ಖಾಸಗಿ ಸಹಭಾಗಿತ್ವದಲ್ಲಿ ಈ ಸೇವೆ ದೊರೆಯಲಿದೆ. 150 ಬಸ್‍ಗಳ ಸೇವೆ ಪಡೆಯಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಪರಿಸರ ಸ್ನೇಹಿ ಬಸ್‍ಗಳು ರಸ್ತೆಗಿಳಿಯಲಿವೆ ಎಂದು ಮಾಹಿತಿ ನೀಡಿದರು.

ಪ್ರಥಮ ಹಂತವಾಗಿ ಬೆಂಗಳೂರು ನಗರ ಸಾರಿಗೆಯಲ್ಲಿ ಈ ಸೇವೆ ಪಡೆದು, ನಂತರ ಉಳಿದ ನಗರ ಪಾಲಿಕೆ ವ್ಯಾಪ್ತಿಯಲ್ಲೂ ಎಲೆಕ್ಟ್ರಾನಿಕ್ ಬಸ್‍ಗಳನ್ನು ಸಾರ್ವಜನಿಕ ಸೇವೆಗೆ ನೀಡಲಾಗುವುದು. ಬಸ್‍ಗೆ ಒಮ್ಮೆ ವಿದ್ಯುತ್‍ ಚಾರ್ಜ್‍ ಆದ ನಂತರ 200 ಕಿಲೋ ಮೀಟರ್‌‌ನಷ್ಟು ಮಾತ್ರ ಸಂಚರಿಸಬಹುದು. ಹಾಗಾಗಿ, ಇದನ್ನು ಗಮನದಲ್ಲಿಟ್ಟುಕೊಂಡು ದೂರದ ಸಾರಿಗೆಗೆ ಅವಕಾಶ ನೀಡದೆ, ಬೆಂಗಳೂರು ಕೇಂದ್ರದಿಂದ ಸಮೀಪದ ನಗರ ಪಟ್ಟಣಗಳಿಗೆ ಇದರ ಸೇವೆ ಕಲ್ಪಿಸಲಾಗುವುದು ಎಂದರು.

ಬೆಂಗಳೂರು, ಮೈಸೂರು, ಬಳ್ಳಾರಿ, ಹೊಸಪೇಟೆ ಹಾಗೂ ನೆಲಮಂಗಲದಲ್ಲಿರುವ ಟ್ರಕ್ ಟರ್ಮಿನಲ್‍ಗಳನ್ನು 70 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಾಗಿ ತಿಳಿಸಿದ ಸಚಿವರು, ಕಳೆದ ಕೆಲವಾರು ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿದರು.

ಆರ್‌‌ಟಿಒ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ನೇಮಕಾತಿಗೆ ಇಲಾಖೆಯಲ್ಲೇ ಇರುವ ಅಸಮಾಧಾನವನ್ನು ಹೊಗಲಾಡಿಸಿ, ಭರ್ತಿ ಮಾಡುವುದಾಗಿ ಹೇಳಿದರು.

ಕನಕರ ಪ್ರತಿಮೆ ಸ್ಥಾಪನೆ: ವಿಧಾನಸೌಧ ಮತ್ತು ಶಾಸಕರ ಭವನದ ನಡುವೆ 20 ಅಡಿ ಎತ್ತರದ ಕನಕರ ಕಂಚಿನ ಪ್ರತಿಮೆ ಸ್ಥಾಪಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಪ್ರತಿಮೆ ಸ್ಥಾಪನೆಗೆ ಸರ್ಕಾರ ಎರಡು ಕೋಟಿ ರೂ. ಬಿಡುಗಡೆ ಮಾಡಿದ್ದು, ಇನ್ನು 45 ದಿನದೊಳಗಾಗಿ ಕನಕರ ಪ್ರತಿಮೆ ಸ್ಥಾಪನೆಗೊಳ್ಳಲಿದೆ ಎಂದು ತಿಳಿಸಿದರು.