- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಜ. 18ಕ್ಕೆ ನಾಲ್ಕೂವರೆ ಲಕ್ಷ ತುಳಸಿ ಗಿಡ

basil-plant [1]ಉಡುಪಿ: ಭಾವೀ ಪರ್ಯಾಯ ಪೀಠ ಅಲಂಕರಿಸಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸಂಕಲ್ಪ ಮಾಡಿರುವ ಪ್ರತಿದಿನ ಲಕ್ಷ ತುಳಸಿ ಯಜ್ಞಕ್ಕಾಗಿ ತುಳಸಿ ವನ ನಿರ್ಮಾಣದ ಕಾರ್ಯ ವೇಗವಾಗಿ ಸಾಗುತ್ತಿದೆ. ಉಡುಪಿಯ ಪೆರಂಪಳ್ಳಿಯಲ್ಲಿ ಸುಮಾರು 6.5 ಎಕ್ರೆ ಪ್ರದೇಶದಲ್ಲಿ ತುಳಸಿ ವನ ನಿರ್ಮಾಣವಾಗುತ್ತಿದ್ದು, ಪ್ರತಿದಿನ ಇಲ್ಲಿ ತುಳಸಿ ಗಿಡ ನೆಡುವ ಹಾಗೂ ಬೀಜ ಹಾಕುವ ಕಾಯಕ ನಡೆಯುತ್ತಿದೆ.

ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣನಿಗೆ ನಿರಂತರ 1 ಲಕ್ಷ ತುಳಸಿ ದಳದ ಯಜ್ಞ ಪ್ರಥಮ ಬಾರಿಗೆ ನಡೆಯಲಿದೆ. ಈ ಯಜ್ಞಕ್ಕಾಗಿ 7.5 ಲಕ್ಷ ತುಳಸಿ ಸಸಿಗಳ ಅವಶ್ಯಕತೆ ಇದೆ. ಎರಡೂವರೆ ಲಕ್ಷ ಗಿಡ ಸಸಿಗಳು ನೆಟ್ಟು ಪೂರ್ಣಗೊಳಿಸಲಾಗಿದೆ. ಪರ್ಯಾಯ ಸ್ವೀಕರಿಸಲಿರುವ ಜ. 18ರವರಗೆ ಒಟ್ಟು ನಾಲ್ಕೂವರೆ ಲಕ್ಷ ಗಿಡಗಳನ್ನು ಪೂರ್ಣಗೊಳ್ಳಲಿದೆ.

ಅನಂತರ ಪರ್ಯಾದ ಅವಧಿಯಲ್ಲಿಯೂ ತುಳಸಿ ಗಿಡ ನೆಡುವ ಕಾರ್ಯಮುಂದುವರಿಯುತ್ತದೆ. ಸುಮಾರು 46 ವರ್ಷಗಳಿಂದ ತುಳಸಿ ಗಿಡದ ಬೆಳಸುವಲ್ಲಿ ಪರಿಣತಿ ಹೊಂದಿರುವ ಹೋದರಾಳಿ ವೇಂಕಟ ರಾಘವೇಂದ್ರ ಭಟ್‌ ತುಳಸಿ ವನ ನಿರ್ಮಿಸುವ ಜವಾಬ್ದಾರಿ ವಹಿಸಿಡಿಕೊಂಡಿದ್ದಾರೆ.

2017ರ ಅಕ್ಟೋಬರ್‌ 15ರಿಂದ ತುಳಸಿ ವನ ನಿರ್ಮಾಣ ಪ್ರಾರಂಭವಾಗಿದೆ. ಸದ್ಯ ಗಿಡಗಳಿಗೆ ಪೈಪ್‌ಲೈನ್‌ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರಾರಂಭದಲ್ಲಿ ನೆಟ್ಟಿರುವ ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಬೀಜ ಹಾಕಿ ಬೆಳೆಸಿದ 7 ವರ್ಷದವರೆಗೆ ಗಿಡ ಬಾಳಿಕೆ ಬರುತ್ತದೆ. ನೆಟ್ಟು ಬೆಳೆಸಿದರೆ ಒಂದೆರಡು ವರ್ಷ ಮಾತ್ರ ಬೆಳೆಯುತ್ತದೆ.

ಆದರೆ ಇಲ್ಲಿ ಕೆಂಪು ಮಣ್ಣು ಇಲ್ಲ. ಜೇಡಿ ಮಿಶ್ರಿತ ಮುರಕಲ್ಲು ಮಣ್ಣು ಇರುವುದರಿಂದ ಗಿಡ 6 ತಿಂಗಳ ಕಾಲ ಬಾಳಿಕೆ ಬರುತ್ತದೆ. ಸದ್ಯ ಬಾವಿಯಿಂದ ನೀರು ಬಳಕೆ ಮಾಡಲಾಗುತ್ತಿದೆ. ಕಡಿಮೆಯಾದರೆ ಬೋರ್‌ವೆಲ್‌ ನೀರು ಬಳಕೆ ಮಾಡಬೇಕಾಗುತ್ತದೆ ಎನ್ನುತ್ತಾರೆ ತುಳಸಿ ವನ ನಿರ್ಮಾಣದ ಉಸ್ತುವಾರಿ ವಹಿಸಿರುವ ವೇಂಕಟ ರಾಘವೇಂದ್ರ ಭಟ್‌.

ತುಳಸಿ ವನದಲ್ಲಿ ಕೃಷ್ಣ ತುಳಸಿ ಹಾಗೂ ಲಕ್ಷ್ಮೀ ತುಳಸಿ ಎನ್ನುವ ಎರಡು ಜಾತಿಯ ಸಸಿಗಳಿವೆ. ರಾಜ್ಯದ ವಿವಿಧ ಭಾಗಗಳಿಂದ ತುಳಸಿ ಬೀಜ ಹಾಗೂ ಸಸಿಗಳನ್ನು ದಾನ ಮಾಡುತ್ತಿದ್ದಾರೆ. ಬೆಂಗಳೂರು, ತುಮಕೂರು, ಕೋಟೇಶ್ವರ, ಪುತ್ತೂರು, ಬಿ.ಸಿ ರೋಡ್‌, ಕುಂಭಾಶಿ, ತೆಕ್ಕಟ್ಟೆ ಮೊದಲಾದ ಭಾಗಗಳಿಂದ ತುಳಸಿ ಬೀಜ ತರಲಾಗುತ್ತಿದೆ.