- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರಿನಲ್ಲಿ ಬಶೀರ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ನಾಲ್ವರ ಬಂಧನ

karavali [1]ಮಂಗಳೂರು: ದೀಪಕ್ ಹತ್ಯೆಯಾದ ದಿನವೇ ಕೊಟ್ಟಾರ ಚೌಕಿ ಬಳಿ ಬಶೀರ್ ಎಂಬುವವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರಲ್ಲಿ ಇಬ್ಬರು ಪಡೀಲ್ ನಿವಾಸಿಗಳಾಗಿದ್ದು, ಒಬ್ಬ ಮಂಜೇಶ್ವರ ಹಾಗೂ ಇನ್ನೊಬ್ಬ ಕಾಸರಗೋಡಿನವರು. ನಾಲ್ವರೂ ಕೂಡ ಕ್ರಿಮಿನಲ್ ಹಿನ್ನೆಲೆಯವರಾಗಿದ್ದಾರೆ ಎಂದು ತಿಳಿದು ಬಂದಿದೆ. ಕೊಟ್ಟಾರದಲ್ಲಿ ಫಾಸ್ಟ್‌ಫುಡ್ ವ್ಯಾಪಾರ ಮಾಡುತ್ತಿದ್ದ ಬಶೀರ್ (48) ಎಂಬುವವರು ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ವೇಳೆ, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ತಲವಾರಿನಿಂದ ಹೊಡೆದು ಪರಾರಿಯಾಗಿದ್ದರು. ಬಶೀರ್ ಎದೆಯ ಕೆಳಭಾಗ, ಗಂಟಲು ಹಾಗೂ ತಲೆ ಭಾಗಕ್ಕೆ ತೀವ್ರವಾಗಿ ಗಾಯಗಳಾಗಿವೆ. ಹಲ್ಲೆಗೊಳಗಾದ ಬಶೀರ್ ರಸ್ತೆಯಲ್ಲೇ ಬಿದ್ದಿರುವುದನ್ನು ಕಂಡ ಕೇಶವ್ ಎಂಬುವವರು ಬಶೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು.

ದೀಪಕ್ ಹತ್ಯೆಗೆ ಪ್ರತೀಕಾರವಾಗಿ ಈ ಹಲ್ಲೆ ನಡೆದಿದೆ ಎಂಬುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ. ಇದೀಗ ಬಶೀರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಶೀರ್ ಅವರ ಮೇಲೆ ದುಷ್ಕರ್ಮಿಗಳ ಹಲ್ಲೆ ನಡೆಸಿದ ದೃಶ್ಯಾವಳಿಗಳು ಖಾಸಗಿ ವ್ಯಕ್ತಿಯೊಬ್ಬರು ಅಳವಡಿಸಿದ ಸಿಸಿಟಿವಿಯಲ್ಲಿ ದಾಖಲಾಗಿದ್ದು, ತನಿಖೆಗಾಗಿ ಇದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ, ಈ ದೃಶ್ಯಾವಳಿ ರಾಜ್ಯಮಟ್ಟದ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪೊಲೀಸ್ ಕಮಿಷನರ್ ಟಿ. ಆರ್. ಸುರೇಶ್ ವಿಡಿಯೊ ಸೋರಿಕೆಯಾದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

ಅಲ್ಲದೆ, ದೃಶ್ಯಾವಳಿಗಳನ್ನು ಬಿತ್ತರಿಸಿದ್ದರಿಂದ ಸುದ್ದಿವಾಹಿನಿಗಳು ಪೊಲೀಸರ ತನಿಖೆಗೆ ಅಡ್ಡಿಪಡಿಸಿದ್ದಲ್ಲದೆ, ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಧಕ್ಕೆಯಾಗಿದೆ ಎಂದು ಹೇಳಿದ ಪೊಲೀಸ್ ಕಮಿಷನರ್, ವಾಹಿನಿಗಳಿಗೆ ಈ ಬಗ್ಗೆ ನೋಟೀಸ್ ನೀಡುವಂತೆ ಜಿಲ್ಲಾಧಿಕಾರಿ ನೇತೃತ್ವದ ಮೀಡಿಯಾ ಮಾನಿಟರಿಂಗ್ ಸಮಿತಿಗೆ ಆಗ್ರಹಿಸಿರುವುದಾಗಿ ತಿಳಿಸಿದ್ದಾರೆ.