ಬಿಜೆಪಿ ಒಂದು ಡ್ರಾಮಾ ಕಂಪನಿ…ಮೋದಿ ಅದರ ಮಾಲೀಕ, ಶಾ ಮ್ಯಾನೇಜರ್‌

1:25 PM, Friday, January 12th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

narendra-modiಮಂಗಳೂರು: ಬಿಜೆಪಿಯೊಂದು ಡ್ರಾಮಾ ಕಂಪನಿ. ನರೇಂದ್ರ ಮೋದಿ ಅದರ ಮಾಲೀಕರಾದರೆ, ಅಮಿತ್ ಶಾ ಮ್ಯಾನೇಜರ್ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಟೇಕಿಸಿದ್ದಾರೆ.

ನಗರದ ಶಕ್ತಿನಗರದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ವಸತಿ ಸಂಕೀರ್ಣಕ್ಕೆ ಕಟ್ಟಡ ನಿರ್ಮಾಣ ಶಿಲಾನ್ಯಾಸ, ಫಲಕ ಅನಾವರಣಗೊಳಿಸಿದ ಬಳಿಕ ಮಾತನಾಡಿದರು. ಈಸ್ಟ್ ಇಂಡಿಯಾ ಕಂಪನಿ ಕೂಡಾ ದೇಶವನ್ನು ಇದೇ ರೀತಿ ಕೊಳ್ಳೆ ಹೊಡೆದಿತ್ತು. ಬಿಜೆಪಿಯವರು ಹಣ ನೀಡಿ ಮತದಾರರನ್ನು ಖರೀದಿಸುವ ಭ್ರಮೆಯಲ್ಲಿದ್ದಾರೆ. ಆದರೆ, ಕರ್ನಾಟಕದ ಮತದಾರರು ಸ್ವಾಭಿಮಾನಿಗಳು. ಬಿಜೆಪಿ ನಾಟಕ ಇಲ್ಲಿ ನಡೆಯಲ್ಲ. ಇದನ್ನು ಪ್ರಧಾನಿ ಮೋದಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಕರಾವಳಿಯಲ್ಲಿ ಕೋಮುಗಲಭೆಗೆ ರಾಜಕೀಯ ನಾಯಕರ, ಸಂಘಟನೆಗಳ ಕುಮ್ಮಕ್ಕು ಇದೆ. ಇಲ್ಲಿ ಬಲಪಂಥೀಯರು, ಪಿಎಫ್ಐನವರ ಓವರ್ ಆ್ಯಕ್ಟಿಂಗ್‌ನಿಂದ ಗಲಾಟೆಗಳು ನಡೆಯುತ್ತಿವೆ. ಇವರೆಲ್ಲಾ ಸ್ವಲ್ಪ ಸುಮ್ಮನಿದ್ದರೆ ಎಲ್ಲವೂ ಸರಿಯಾಗುತ್ತದೆ. ಜನಸಾಮಾನ್ಯರಿಗೆ ಗಲಾಟೆಗಳು ಬೇಕಾಗಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

ಸಂಘಟನೆಗಳ ನಿಷೇಧದ ಕುರಿತು ಮಾತನಾಡಿದ ಅವರು, ನಿಷೇಧಿಸಿದರೆ ಎರಡೂ ಕಡೆಯ ಸಂಘಟನೆಗಳನ್ನು ನಿಷೇಧಿಸಬೇಕು. ಈ ಬಗ್ಗೆ ಚರ್ಚಿಸಲು ಪ್ರಸ್ತುತ ಮುಖ್ಯಮಂತ್ರಿ ಪ್ರವಾಸದಲ್ಲಿದ್ದಾರೆ. ಈ ಸಂಘಟನೆಗಳಿಗೆ ನಾವೇ ಏನೂ ಮಾಡಬೇಕಾಗಿಲ್ಲ. ನೆಮ್ಮದಿ ಕೆಡಿಸುವ ಸಂಘಟನೆಗಳ ವಿರುದ್ಧ ರೊಚ್ಚಿಗೆದ್ದು ಜನರೇ ಉತ್ತರ ನೀಡಲಿದ್ದಾರೆ ಎಂದರು.

ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಹೋರಾಟ ನಡೆಸಿದವರು ಮೂಡಿಗೆರೆಯಲ್ಲಿ ಧನ್ಯಶ್ರೀ ಪ್ರಾಣ ಹೋದಾಗ ಯಾಕೆ ಸುಮ್ಮನಿದ್ದರು? ಆಕೆಯ ಸಾವಿಗೆ ಬೆಲೆ ಇಲ್ಲವೇ? ಈ ವಿಷಯದಲ್ಲಿ ದ್ವಂದ್ವ ನೀತಿ ಯಾಕೆ? ಆಕೆಯ ಸಾವಿನ ಹಿಂದಿರುವವರು ಹಿಂದೂ ಯುವ ಮೋರ್ಚಾದವರು. ಪೊಲೀಸರು ಈಗಾಗಲೇ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ-ಗೋವಾ ನಡುವಿನ ಮಹದಾಯಿ ವಿಚಾರದಲ್ಲಿ ರಾಜ್ಯ ಬಿಜೆಪಿ ಹೈಡ್ರಾಮಾ ಮಾಡುತ್ತಿದೆ. ಪರಿಕ್ಕರ್ ಪತ್ರ ಬರೆದಿದ್ದು ಆಯಿತು, ಯುಪಿ ಸಿಎಂ ಅವರಿಂದ ಓದಿಸಿದ್ದೂ ಆಯಿತು. ಕೇಂದ್ರದಿಂದ ರಾಜ್ಯ ಬಿಜೆಪಿಗೆ ಮಂಗಳಾರತಿಯೂ ಆಗಿದೆ ಎಂದು ಅವರು ರಾಮಲಿಂಗಾರೆಡ್ಡಿ ಲೇವಡಿ ಮಾಡಿದರು.

ಮಹದಾಯಿ ಪ್ರಕರಣವನ್ನು ನ್ಯಾಯಾಧಿಕರಣ ಹೊರಗೆಯೂ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಆದರೆ, ನ್ಯಾಯಾಲಯದಲ್ಲಿ ಉಭಯ ರಾಜ್ಯಗಳ ವಾದ ಮಂಡಿಸಿದ ಬಳಿಕ ನ್ಯಾಯ ಇತ್ಯರ್ಥವಾಗಲಿದೆ. ಚುನಾವಣೆಗಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.

ಸುಮಾರು 6.90ಕೋಟಿ ರೂ. ವೆಚ್ಚದ ಕಟ್ಟಡಕ್ಕೆ ಸಚಿವರು ಶಿಲಾನ್ಯಾಸ ನೆರವೇರಿಸಿದರು. ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ 32 ವಸತಿಗಳಿರುವ ಕಟ್ಟಡ ಇದಾಗಿದೆ. ರಾಜ್ಯದಲ್ಲಿ ಈಗಾಗಲೇ ಹನ್ನೊಂದು ಸಾವಿರ ಮನೆ ನಿರ್ಮಾಣದ ಉದ್ದೇಶವಿದ್ದು, ಇದರಲ್ಲಿ ಎರಡು ಸಾವಿರ ಮನೆಗಳು ಪೂರ್ಣಗೊಂಡಿದ್ದು, ನಾಲ್ಕು ಸಾವಿರ ಮನೆಗಳು ಅಭಿವೃದ್ಧಿ ಹಂತದಲ್ಲಿವೆ. ಹಳೆಯ ಕ್ವಾರ್ಟಸ್‌ ರಿಪೇರಿಗೂ ಆದ್ಯತೆ ನೀಡಲಾಗಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ಮಾಹಿತಿ ನೀಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English