- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಳಿಕೆ ರಾಮಯ್ಯ ರೈ ಯಕ್ಷಗಾನ ಕ್ಷೇತ್ರದ ಸವ್ಯಸಾಚಿ

Tulu-sahitya [1]ಮಂಗಳೂರು: ಯಕ್ಷಗಾನ ಕ್ಷೇತ್ರದ ಸವ್ಯಸಾಚಿಯಾಗಿ ಮೆರೆದವರು ದಿ.ಅಳಿಕೆ ರಾಮಯ್ಯ ರೈ ಎಂದು ಪ್ರಾಧ್ಯಾಪಕ, ತುಳು ಸಾಹಿತ್ಯ ಅಕಾಡೆಮಿ ಮತ್ತು ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಭಾಸ್ಕರ್ ರೈ ಕುಕ್ಕುವಳ್ಳಿ ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಸಾಹಿತಿ ಕಲಾವಿದರ ಜನ್ಮ ಶತಮಾನೋತ್ಸವ ಕಾರ‍್ಯಕ್ರಮ ಸರಣಿಯ ಪ್ರಥಮ ಕಾರ‍್ಯಕ್ರಮವಾಗಿ ಅಕಾಡೆಮಿಯ ಸಿರಿಚಾವಡಿಯಲ್ಲಿ ಶುಕ್ರವಾರ ನಡೆದ ಯಕ್ಷಗಾನ ದಿಗ್ಗಜ ಅಳಿಕೆ ರಾಮಯ್ಯ ರೈ ಸಂಸ್ಮರಣೆ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.

ತನ್ನ ೧೧ನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸಿದ ಅಳಿಕೆ ರಾಮಯ್ಯ ರೈ ಯವರು ತುಳುನಾಡಿನ ಪ್ರಮುಖ ಯಕ್ಷಗಾನ ಮೇಳಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದವರು. ೬೪ ವರ್ಷಗಳ ಯಕ್ಷಸೇವೆಯಲ್ಲಿ ೩ ತಲೆಮಾರುಗಳ ಕಲಾವಿದರು ಹಾಗೂ ಮೇಳಗಳ ಯಜಮಾನರುಗಳ ಜತೆಯಲ್ಲಿ ದುಡಿದವರು. ತನ್ನ ಅಮೋಘ ಪಾತ್ರಗಳ ಮೂಲಕ ಪೌರಾಣಿಕ ಪಾತ್ರಗಳಿಗೆ ಜೀವಂತಿಕೆ ತಂದು ಕೊಟ್ಟವರು ರಾಮಯ್ಯ ರೈಯವರು ಎಂದು ಭಾಸ್ಕರ್‌ರೈ ರವರು ಹೇಳಿದರು.

ಅಕಾಡೆಮಿ ಅಧ್ಯಕ್ಷ ಶ್ರೀ ಎ.ಸಿ ಭಂಡಾರಿ ಯವರು ಅಧ್ಯಕ್ಷತೆ ವಹಿಸಿದ್ದರು. ತುಳು ಭಾಷಾ ಬೆಳವಣಿಗೆಗೆ ಯಕ್ಷಗಾನ ಮತ್ತು ತುಳು ರಂಗಭೂಮಿಯವರು ವಿಶೇಷ ಕೊಡುಗೆ ನೀಡಿದ್ದು ಈ ನಿಟ್ಟಿನಲ್ಲಿ ಯಕ್ಷಗಾನ -ನಾಟಕ ಕ್ಷೇತ್ರದ ಹಿರಿಯರನ್ನು ಅಕಾಡೆಮಿ ವತಿಯಿಂದ ಗೌರವಿಸುವ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಾಹಿತಿ-ಕಲಾವಿದರು ಹಾಗೂ ತುಳು ರಂಗಭೂಮಿಯಲ್ಲಿ ದುಡಿದು ಅಗಲಿರುವ ದಿಗ್ಗಜರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದರು. ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಶಶಿಲೇಖಾ. ಬಿ ರವರು ಕಾರ‍್ಯಕ್ರಮ ಉದ್ಘಾಟಿಸಿದರು.ಮಹಿಳೆ ಮತ್ತು ಯಕ್ಷಗಾನ ವಿಷಯದ ಬಗ್ಗೆ ನವದೆಹಲಿಯ ಯಕ್ಷ ಮಂಜೂಷದ ನಿರ್ದೇಶಕಿ ಶ್ರೀಮತಿ ವಿದ್ಯಾ ಕೋಳ್ಯೂರು ವಿಚಾರ ಮಂಡಿಸಿದರು.

ಅಳಿಕೆ ರಾಮಯ್ಯ ರೈಯವರ ಪುತ್ರ, ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಮೆನೇಜರ್ ಬಾಲಕೃಷ್ಣ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸಭಾ ಕಾರ‍್ಯಕ್ರಮದ ಬಳಿಕ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಸದಸ್ಯರಿಂದ ಡಾ.ದಿನಕರ ಎಸ್. ಪಚ್ಚನಾಡಿಯವರ ನಿರ್ದೇಶನದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ ತಾಳಮದ್ದಳೆ ಕೂಟ ನಡೆಯಿತು. ಅಳಿಕೆ ರಾಮಯ್ಯ ರೈಯವರ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳು ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ‍್ಯಕ್ರಮದ ಸಂಚಾಲಕ ನಿರಂಜನ ರೈ ಮಠಂತಬೆಟ್ಟು ಸ್ವಾಗತಿಸಿದರು, ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ.ಬಿ ಪ್ರಸ್ತಾವನೆ ಗೈದರು. ಅಕಾಡೆಮಿ ಸದಸ್ಯ ಗೋಪಾಲ್ ಅಂಚನ್ ವಂದಿಸಿದರು, ಸುಧಾನಾಗೇಶ್ ಕಾರ‍್ಯಕ್ರಮ ನಿರ್ವಹಿಸಿದರು.