- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೀನುಗಾರಿಕಾ ದೋಣಿ ಮುಳುಗಿ 6 ಮಂದಿ ಮೀನುಗಾರರು ನಾಪತ್ತೆ

meenugararu [1]
ಮಂಗಳೂರು: ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ 6 ಮಂದಿ ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರಿನ ಅಳಿವೆ ಬಾಗಿಲಿನ ಸಮೀಪ ಅರಬಿ ಸಮುದ್ರದಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ.
‘ಓಶಿಯನ್‌ ಫಿಶರೀಸ್‌- 2’ ಎಂಬ ಮೀನುಗಾರಿಕಾ ದೋಣಿಯಲ್ಲಿ 8 ದಿನಗಳ ಹಿಂದೆ 7 ಜನ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು, ಮೀನು ಹಿಡಿದು ಹಿಂದಿರುಗುತ್ತಿದ್ದಾಗ ಮಂಗಳೂರಿನ ಅಳಿವೆ ಬಾಗಿಲಿನ ಸಮೀಪ ದುರ್ಘ‌ಟನೆ ಸಂಭವಿಸಿದೆ.
ದೋಣಿಯಲ್ಲಿದ್ದ ೭ಜನರ ಪೈಕಿ ದೋಣಿಯ ಚಾಲಕ ಬಳ್ಳಾರಿ ಹೊಸಪೇಟೆಯ ಕಾಂಬ್ಲಿಪುರ ಕಂಟರ್‌ಬಿನ್ನೆಯ ಶ್ರೀಕಾಂತ್‌, ಕೊಪ್ಪಳದ ನಾರಾಯಣ, ಮಂಗಳೂರು ಪಂಜಿಮೊಗರಿನ ರಹಿಮಾನ್‌,ರಮಣನ್‌, ಶಿವ, ಬಿಶಾಕ್‌ ಸಮುದದಲ್ಲಿ ಮುಳುಗಿ ನಾಪತ್ತೆಯಾದವರು. ಕೇರಳದ ತಿರುವನಂತಪುರದ ಪುದಿಯಪುರದ ವಿನ್ಸೆಂಟ್‌ (56) ಬೇರೊಂದು ದೋಣಿಯವರಿಂದ ರಕ್ಷಿಸಲ್ಪಟ್ಟು , ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ. ದೋಣಿಯಲ್ಲಿ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಮೀನಿತ್ತು ಎಂದು ಅವರು ತಿಳಿಸಿದ್ದಾರೆ.

ವಿನ್ಸೆಂಟ್‌ ಅವರು ದೋಣಿಯಲ್ಲಿದ್ದ ಫೈಬರ್‌ ಹಲಗೆಯೊಂದನ್ನು ಸೊಂಟಕ್ಕೆ ಕಟ್ಟಿ ಸಮುದ್ರಕ್ಕೆ ಹಾರಿದ ಕಾರಣ ಅಪಾಯದಿಂದ ಪಾರಾಗಲು ಸಾಧ್ಯವಾಯಿತು. ಅವರು ಮುಂಜಾನೆ 5ರಿಂದ ಸುಮಾರು 10 ಗಂಟೆ ವರೆಗೆ ಸಮುದ್ರದಲ್ಲಿ ಹಲಗೆಯ ಸಹಾಯದಿಂದ ಮುಳುಗೇಳುತ್ತಾ ಇದ್ದು, ಎಸ್‌.ಎಂ. ಫಿಶರೀಸ್‌ ಎಂಬ ಮೀನುಗಾರಿಕಾ ದೋಣಿಯವರು ರಕ್ಷಿಸಿದರು. ಸಮುದ್ರದ ಅಲೆಗಳ ಅಬ್ಬರಕ್ಕೆ ದೋಣಿಯ ಒಳಗೆ ನೀರು ನುಗ್ಗಿದ ಕಾರಣ ಅದು ಮುಳುಗಡೆಯಾಗಿದೆ ಎಂದು ತಿಳಿದು ಬಂದಿದೆ.

ಆತನನ್ನು ರಕ್ಷಿಸಿದ್ದರೂ ದೋಣಿ ಅಳಿವೆಯನ್ನು ದಾಟಿ ಒಳಗೆ ಬರಲು ಸಾಧ್ಯವಾಗದ ಕಾರಣ 11 ಗಂಟೆಯ ವರೆಗೆ ಅಲ್ಲಿಯೇ ಉಳಿಯ ಬೇಕಾಯಿತು. ತಡವಾಗಿ ದೋಣಿ ಅಳಿವೆ ಬಾಗಿಲು ದಾಟಿ ದಕ್ಕೆಗೆ ತಲುಪಿದ ತತ್‌ಕ್ಷಣ ವಿನ್ಸೆಂಟ್‌ನನ್ನು ಅಲ್ಲಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯ ಕ್ಯಾಶುವೆಲ್‌ಟಿ ವಿಭಾಗದಲ್ಲಿ ತುರ್ತು ಚಿಕಿತ್ಸೆ ನೀಡಿದ ಬಳಿಕ ಎಕ್ಸ್‌ರೇ ತೆಗೆದು ವಾರ್ಡ್‌ಗೆ ಸ್ಥಳಾಂತರಿಸಲಾಯಿತು.

ಈ ದೋಣಿಯನ್ನು 4 ತಿಂಗಳ ಹಿಂದೆ ನಗರದ ಅತ್ತಾವರ ನಂದಿಗುಡ್ಡೆಯ ಎಸ್‌.ಎಂ. ಇಬ್ರಾಹಿಂ ಅವರು ಫರಂಗಿಪೇಟೆಯ ಮಹಮದ್‌ ನಝೀರ್‌ ಅವರಿಂದ ಖರೀದಿಸಿದ್ದರು. ದೋಣಿಯ ದಾಖಲೆ ಪತ್ರಗಳೆಲ್ಲ ಮಹಮದ್‌ ನಜೀರ್‌ ಅವರ ಹೆಸರಿನಲ್ಲಿಯೇ ಇದ್ದು, ಅಧಿಕೃತವಾಗಿ ಎಸ್‌.ಎಂ. ಇಬ್ರಾಹಿಂ ಅವರ ಹೆಸರಿಗೆ ವರ್ಗಾವಣೆಗೊಂಡಿರಲಿಲ್ಲ.

ಕಾಣೆಯಾದವರಿಗಾಗಿ ಕೋಸ್ಟ್‌ ಗಾರ್ಡ್‌, ಕರಾವಳಿ ಕಾವಲು ಪೊಲೀಸ್‌ ಮತ್ತು ಇತರ ಪೊಲೀಸರು ಶೋಧ ನಡೆಸುತ್ತಿದ್ದಾರೆ.