- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮುನಿಸಂಘ ಧರ್ಮಸ್ಥಳ ಪುರ ಪ್ರವೇಶ : ಭವ್ಯ ಸ್ವಾಗತ

dharmastala [1]ಉಜಿರೆ: ಧರ್ಮಸ್ಥಳ ಬಸದಿಯಲ್ಲಿರುವ ಐತಿಹಾಸಿಕ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಮೂರ್ತಿಯು ಹವಳದ ಬಣ್ಣ ಹೊಂದಿರುವುದು ವಿಶಿಷ್ಟವಾಗಿದೆ. ಶಾಂತಚಿತ್ತರಾಗಿ ಈ ಮೂರ್ತಿಯ ದರ್ಶನ ಮಾಡಿ ಪ್ರಾರ್ಥನೆ ಮತ್ತು ಧ್ಯಾನ ಮಾಡಿದರೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಪರಮಪೂಜ್ಯ ಆಚಾರ್ಯ ಶ್ರೀ 108 ದೇವನಂದಿ ಮಹಾರಾಜ್ ಹೇಳಿದರು.

ಧರ್ಮಸ್ಥಳಕ್ಕೆ ತಮ್ಮ ಸಂಘದೊಂದಿಗೆ ಭಾನುವಾರ ಸಂಜೆ ಪುರ ಪ್ರವೇಶ ಮಾಡಿದಾಗ ಅವರಿಗೆ ಭವ್ಯ ಸ್ವಾಗತ ಕೋರಿ ಮೆರವಣಿಗೆಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಗೆ ಕರೆದುಕೊಂಡು ಹೋಗಲಾಯಿತು.

ಅಲ್ಲಿ ದೇವರ ದರ್ಶನದ ಬಳಿಕ ಅವರು ಮಂಗಲ ಪ್ರವಚನ ನೀಡಿದರು.ಸಾಮಾನ್ಯವಾಗಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಮತ್ತು ಪುಷ್ಪದಂತ ತೀರ್ಥಂಕರರ ಮೂರ್ತಿಗಳು ಬಿಳಿ ಬಣ್ಣದಲ್ಲಿರುತ್ತದೆ. ಆದರೆ ಇಲ್ಲಿನ ಮೂರ್ತಿ ಹವಳದ ಬಣ್ಣ ಹೊಂದಿದ್ದು ಐತಿಹಾಸಿಕ ಮಹತ್ವ ಹೊಂದಿರುವುದಲ್ಲದೆ ಅದ್ಭುತ ಸಾನ್ನಿಧ್ಯ ಹಾಗೂ ಮಹತ್ವಪೂರ್ಣ ಪರಂಪರೆ ಹೊಂದಿದೆ ಎಂದರು. ಇಲ್ಲಿನ ಮೂರ್ತಿಯ ವಿನ್ಯಾಸ ಮತ್ತು ಶೈಲಿ ತನಗೆ ಅತ್ಯಂತ ಇಷ್ಟವಾಗಿದ್ದು ಧರ್ಮಸ್ಥಳಕ್ಕೆ ತಾನು ಬರುತ್ತಿರುವುದು ಇದು ಐದನೇ ಬಾರಿಯಾಗಿದೆ ಎಂದರು. ತಾನು ಕೂಡಾ ಇದೇ ರೀತಿಯ ಮೂರ್ತಿಯನ್ನು ನಿರ್ಮಿಸಲು ಉದ್ದೇಶಿಸಿರುವುದಾಗಿ ತಿಳಿಸಿದರು.

ಭಾರತದಲ್ಲಿ ೪೦೦ಕ್ಕೂ ಮಿಕ್ಕಿ ತೀರ್ಥ ಕ್ಷೇತ್ರಗಳಿವೆ. ಧರ್ಮಸ್ಥಳ, ಮೂಡಬಿದ್ರೆ, ವೇಣೂರು, ಕಾರ್ಕಳ, ಶ್ರವಣಬೆಳಗೊಳ ಅತಿಶಯ ಕ್ಷೇತ್ರಗಳಾಗಿವೆ. ತೀರ್ಥಕ್ಷೇತ್ರಗಳ ರಕ್ಷಣೆ ಶ್ರಾವಕರ ಹೊಣೆಗಾರಿಕೆಯಾಗಿದೆ. ತೀರ್ಥಕ್ಷೇತ್ರಗಳು ಸುಸ್ಥಿತಿಯಲ್ಲಿದ್ದಾಗ ಮಾತ್ರ ಜೈನ ಧರ್ಮ ಮತ್ತು ದಿಗಂಬರತ್ವ ಅಸ್ತಿತ್ವದಲ್ಲಿರುತ್ತದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಹಾಪುರುಷರಾಗಿದ್ದು, ರಾಜರ್ಷಿಯಾಗಿ ಅವರು ಮಾಡುತ್ತಿರುವ ಸೇವಾ ಕಾರ್ಯಗಳು ಶ್ಲಾಘನೀಯವಾಗಿವೆ. ಮಾತೃ ಹೃದಯದಿಂದ ಹೇಮಾವತಿ ವಿ. ಹೆಗ್ಗಡೆಯವರು ಕೂಡಾ ಉತ್ತಮ ಸೇವೆ ಮಾಡುತ್ತಿದ್ದಾರೆ. ಸಾಧು-ಸಂತರನ್ನೂ ಶ್ರದ್ಧಾ-ಭಕ್ತಿಯಿಂದ ಗೌರವಿಸಿ ಸೇವೆ ಮಾಡುತ್ತಾರೆ. ಅನೇಕ ಕಡೆಗಳಲ್ಲಿ ತಮ್ಮ ಆಹಾರ-ವಿಹಾರ ಹಾಗೂ ವಿಶ್ರಾಂತಿಗೆ ಅಡಚಣೆಗಳಾಗುತ್ತವೆ. ಆದರೆ, ಧರ್ಮಸ್ಥಳ ಮತ್ತು ಶ್ರವಣಬೆಳಗೊಳದಲ್ಲಿ ಎಲ್ಲಾ ವ್ಯವಸ್ಥೆಯೂ ತಮಗೆ ಅನುಕೂಲಕರವಾಗಿದೆ ಎಂದರು.

ನಮಗೆ ಭಜನೆ ಸಮಯ, ನಿಮಗೆ ಭೋಜನ ಸಮಯ : ಸಂಜೆ 6 ಗಂಟೆಯಾಗುತ್ತಲೇ ನಮಗೆ ಭಜನೆ ಸಮಯ, ನಿಮಗೆ ಭೋಜನ ಸಮಯ ಎಂದು ಹೇಳಿ ಮುನಿಗಳು ಮಂಗಲ ಪ್ರವಚನವನ್ನು ಮುಕ್ತಾಯಗೊಳಿಸಿ ಎಲ್ಲರಿಗೂ ಆಶೀರ್ವಾದ ನೀಡಿದರು.

108 ಯಶಕೀರ್ತಿ ಮುನಿ ಮಹಾರಾಜರು, 108 ಸಕಲಕೀರ್ತಿ ಮುನಿ ಮಹಾರಾಜರು, 108 ಸಿದ್ಧಕೀರ್ತಿ ಮುನಿ ಮಹಾರಾಜರು, 108 ಉತ್ಕರ್ಷಕೀರ್ತಿ ಮುನಿ ಮಹಾರಾಜರು, 108 ಉತ್ತಮಕೀರ್ತಿ ಮುನಿ ಮಹಾರಾಜರು ಹಾಗೂ ಮಾತಾಜಿಯವರಾದ ಆರ್ಯಿಕಾ 105 ಸುಜ್ಞಾನಶ್ರೀ ಮಾತಾಜಿ, ಆರ್ಯಿಕಾ 105 ಪ್ರಜ್ಞಾಶ್ರೀ ಮಾತಾಜಿ, ಆರ್ಯಿಕಾ 105 ಚರಿತ್ರಶ್ರೀ ಮಾತಾಜಿ, ಆರ್ಯಿಕಾ 105 ಸ್ವಯಂಶ್ರೀ ಮಾತಾಜಿ, ಆರ್ಯಿಕಾ ೧೦೫ ಸಂಪನ್ನಶ್ರೀ ಮಾತಾಜಿ, ಆರ್ಯಿಕಾ 105 ಸುಶೀಲಾಶ್ರೀ ಮಾತಾಜಿ, ಆರ್ಯಿಕಾ ೧೦೫ ಸುಲಭಶ್ರೀ ಮಾತಾಜಿ, ಆರ್ಯಿಕಾ ೧೦೫ ಶ್ರೇಯಶ್ರೀ ಮಾತಾಜಿ, ಆರ್ಯಿಕಾ 105 ದೃಷ್ಟಿಶ್ರೀ ಮಾತಾಜಿ ಉಪಸ್ಥಿತರಿದ್ದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿದರು. ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.