- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

‘ಕೆಟ್ಟ ಆಡಳಿತಗಾರ’ ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಳ್ಳಲ್ಲ: ದೇವೇಗೌಡ

siddaramaih [1]ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಹೇಳಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಹಿನ್ನಲೆಯಲ್ಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿರುವ ದೇವೇಗೌಡರು, ಸಿದ್ದರಾಮಯ್ಯ ಸರಕಾರ ಅತ್ಯಂತ ಕೆಟ್ಟ ಸರಕಾರ ಎಂದು ಜರೆದಿದ್ದಾರೆ.

ದೇವೇಗೌಡರ ಈ ನಡೆಯನ್ನು ಬಿಜೆಪಿಯೆಡೆಗಿನ ಜೆಡಿಎಸ್ ನ ಇನ್ನೊಂದು ಹೆಜ್ಜೆ ಎಂದು ನೋಡಲಾಗುತ್ತಿದೆ.

ದೇವೇಗೌಡರು ಫೆಬ್ರವರಿ 7ರಂದು ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಳ್ಳಬೇಕಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ನಿರೀಕ್ಷೆ ಇದೆ.

ಆದರೆ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯಿಂದ ಸಿದ್ದರಾಮಯ್ಯ ಸರಕಾರದ ವಿರುದ್ಧ ಆಕ್ರೋಶಗೊಂಡಿರುವ ದೇವೇಗೌಡರು ಈ ನಿರ್ಧಾರಕ್ಕೆ ಬಂದಿದ್ದಾರೆ.

“ಇದಕ್ಕಿಂತ ಕೆಟ್ಟ ಸರಕಾರವನ್ನು ನಾನು ನೋಡಿಲ್ಲ. ಹಾಸನಕ್ಕೆ ಫೆಬ್ರವರಿ 7ರಂದು ರಾಷ್ಟ್ರಪತಿಗಳು ಆಗಮಿಸಲಿದ್ದಾರೆ. ಇದೇ ವೇಳೆ ಜಿಲ್ಲಾಧಿಕಾರಿಗಳನ್ನು ಬದಲಿಸಿ ರಾಜಕಾರಣಿಗಳು ಹಣ ಮಾಡಲು ಅವಕಾಶ ನೀಡಿದ್ದಾರೆ,” ಎಂದು ಜೆಡಿಎಸ್ ವರಿಷ್ಠರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಜಿಲ್ಲೆಯ ಪ್ರತಿನಿಧಿಯಾಗಿ ನಾನು ಗೌರವ ತೋರಿಸಬೇಕಾಗಿತ್ತು. ಆದರೆ ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಳ್ಳದಿರಲು ನಾನು ನಿರ್ಧರಿಸಿದ್ದೇನೆ. ಈ ಮುಖ್ಯಮಂತ್ರಿ ಜತೆ ನಾನು ಯಾವುದೇ ವೇದಿಕೆಗಳನ್ನು ಹಂಚಿಕೊಳ್ಳುವುದಿಲ್ಲ. ಈ ಕೀಳುಮಟ್ಟದ ಆಡಳಿತದ ಜತೆ ನಾನು ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ರಾಷ್ಟ್ರಪತಿಗಳಿಗೂ ಪತ್ರ ಬರೆಯುತ್ತೇನೆ,” ಎಂದು ದೇವೇಗೌಡರು ಹೇಳಿದ್ದಾರೆ.

ಕರ್ನಾಟಕದಲ್ಲಿ ಒಂದೊಮ್ಮೆ ಸ್ಪಷ್ಟ ಬಹುಮತ ಬರದೆ ಅತಂತ್ರ ಸರಕಾರ ರಚನೆಯಾದಲ್ಲಿ ತಾವು ಕಾಂಗ್ರೆಸ್ ಜತೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದ ದೇವೇಗೌಡರು ಇದೀಗ ಮುಖ್ಯಮಂತ್ರಿಗಳ ವಿರುದ್ಧ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಸರಕಾರ ಭ್ರಷ್ಟ, ನಾಚಿಕೆಗೇಡು ಸರಕಾರ ಎಂದು ಅವರು ಹೇಳಿದ್ದಾರೆ.

ಜೆಡಿಎಸ್ ಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಗಾಳ ಹಾಕುತ್ತಿರುವುದು ಹೊಸ ವಿಷಯವೇನಲ್ಲ. ಇದೀಗ ದೇವೇಗೌಡರ ಹೇಳಿಕೆ ಹಿನ್ನಲೆಯಲ್ಲಿ ಜೆಡಿಎಸ್ ಬಿಜೆಪಿಯತ್ತ ವಾಲುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.