- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಯಕ್ಷಗಾನಕ್ಕೆ ಗಣೇಶ್‌ ಕೊಲೆಕಾಡಿ ಕೊಡುಗೆ ಅನನ್ಯ

yakshagana [1]ಮೂಲ್ಕಿ: ಯಕ್ಷಗಾನದ ಹೊಸ ಅವಿಷ್ಕಾರದ ಪ್ರಯೋಗಗಳಿಂದ ಯಕ್ಷಗಾನದ ಮೂಲ ವಸ್ತುವಿನ ಸ್ವರೂಪಕ್ಕೆ ಧಕ್ಕೆ ಉಂಟಾಗಬಹುದು ಎಂಬ ಆತಂಕದ ವಾತಾವರಣ ಜನರಲ್ಲಿ ನಿರ್ಮಾಣವಾಗಿದೆ ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ಡಾ| ಭಾಸ್ಕರಾನಂದ ಕುಮಾರ್‌ ಹೇಳಿದರು.

ಅವರು ಮೂಲ್ಕಿಯ ಕುಂಜಾರುಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಯಕ್ಷಗಾನ ಸಾಧಕ,ಕವಿ ಹಾಗೂ ಛಂದಸ್ಸು ಪ್ರವೀಣಾ ಯಕ್ಷಗುರು ಗಣೇಶ್‌ ಕೊಲೆಕಾಡಿಯವರಿಗೆ ಅವರ ಅಭಿಮಾನಿಗಳಿಂದ ನಡೆದ ಸಮ್ಮಾನ ಹಾಗೂ ಗೌರವಾರ್ಪಣೆಯ ಸಮಾರಂಭದಲ್ಲಿ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡಿದರು.

ಗಣೇಶ್‌ ಕೊಲೆಕಾಡಿ ಅವರು ಯಕ್ಷಗಾನ ಪ್ರಪಂಚಕ್ಕೆ ನೀಡಿರುವ ಕೊಡುಗೆ ಅತ್ಯಮೂಲ್ಯವಾದದ್ದು.ಅವರು ಯಕ್ಷಗಾನದ ಉಳಿವಿನಲ್ಲಿ ಕ್ರಾಂತಿಕಾರಿಯಾಗಿ ಹಲವು ಸಾಧನೆ ಮಾಡುವ ಮೂಲಕ ವಿಶೇಷ ವ್ಯಕ್ತಿತ್ವವನ್ನು ಪಡೆದಿರುವ ಅಸಮಾನ್ಯ ಸಾಧಕ ಎಂದರು.

ಧಾರ್ಮಿಕ ಮುಂದಾಳು ವಾದಿರಾಜ ಉಪಾಧ್ಯಾಯ ಮಾತನಾಡಿ, ಗಣೇಶ್‌ ಕೊಲೆಕಾಡಿಯವರು ಹಲವು ವರ್ಷಗಳಿಂದ ಒಂದು ತಪಸ್ಸಿನಂತೆ ತನ್ನ ಅನಾರೋಗ್ಯದ ಕಾಲದಲ್ಲೂ ಯಕ್ಷಗಾನದ ಬಗ್ಗೆ ವಿಶೇಷ ಕಾಳಜಿ ವಹಿಸಿ ಶಿಷ್ಯವೃಂದದವರಿಗೆ ತರಬೇತಿ ನೀಡಿ ಪ್ರಬುದ್ಧ ಕಾಲವಿದರನ್ನು ಬೆಳೆಸಿದ್ದಾರೆ ಎಂದರು.

ಖ್ಯಾತ ಛಂದಸ್ಸುಕಾರ ಡಾ ನಾರಾಯಣ ಶೆಟ್ಟಿ ಶಿಮಂತೂರು, ರಾಜ್ಯ ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು,ನಾಡೋಜ ಕೆ.ಪಿ.ರಾವ್‌, ತೆಂಕು ತಿಟ್ಟಿನ ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರೀ ಅವರು ಗಣೇಶ ಕೊಲಕಾಡಿಯವರನ್ನು ಅಭಿನಂದಿಸಿ ಮಾತನಾಡಿದರು. ಸಮ್ಮಾನಕ್ಕೆ ಉತ್ತರಿಸಿದ ಗಣೇಶ ಕೊಲೆಕಾಡಿ, ನನ್ನ ಬದುಕು ಇರುವುದೇ ಅಭಿಮಾನಿಗಳ ಪ್ರೀತಿಯಿಂದ. ನಾನು ಮಾಡಿರುವ ಸಾಧನೆಯೆಲ್ಲ ನನ್ನ ಗುರುಗಳಿಗೆ ಹಾಗು ಅಭಿಮಾನಿಗಳಿಗೆ ಸಲ್ಲಬೇಕು ಎಂದರು.

ಗಣೇಶ್‌ ಕೊಲೆಕಾಡಿಯವರಿಗೆ ಅವರ ತಾಯಿಯ ಜತೆಗೆ ಶಿಷ್ಯರಿಂದ ಹಾಗೂ ಸಮಿತಿಯ ವತಿಯಿಂದ ಗೌರವಾರ್ಪಣೆ ಹಾಗೂ ನಿಧಿಸಮರ್ಪಣೆ ನಡೆಯಿತು. ಅವರ ಗುರುಗಳಾಗಿದ್ದ ದಿ. ಎಂ.ಡಿ. ಮೂಲ್ಕಿ ಅವರ ಪರವಾಗಿ ಗೋಪಿನಾಥ ಪಡಂಗರಿಗೆ ಹಾಗೂ ದಿ| ಸರಸ್ವತಿ ತಿಮ್ಮಪ್ಪ ಶೆಟ್ಟಿ ಬಾಳಿಕೆ ಮನೆ ಇವರ ಪರವಾಗಿ ರಾಮದಾಸ ಶೆಟ್ಟಿ ಮತ್ತು ಹವ್ಯಾಸಿ ಕಲಾವಿದ ಸುಕುಮಾರ್‌ ಶೆಟ್ಟಿ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು.

ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ, ಮುರಳೀಧರ ಭಟ್‌ ಕಟೀಲು, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್‌, ಭುವನಾಭಿರಾಮ ಉಡುಪ, ಸತ್ಯಜಿತ್‌ ಸುರತ್ಕಲ್‌, ಕಿಲ್ಪಾಡಿ ಬಂಡಸಾಲೆ ಶೇಖರ್‌ ಶೆಟ್ಟಿ, ಲಕ್ಷ್ಮೀ ಟಿ.ಎನ್‌. ಕೋಟ್ಯಾನ್‌, ಸುಶೀಲಾ ನಾರಾಯಣ ಶೆಟ್ಟಿ ಅತಿಥಿಗಳಾಗಿದ್ದರು. ಸಮಿತಿಯ ಅಧ್ಯಕ್ಷ ಗೋಪಿನಾಥ ಪಡಂಗ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಸಂದೀಪ್‌ ಕೋಟ್ಯಾನ್‌ ವಂದಿಸಿದರು.