- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಮುಸ್ಲಿಂ ಧರ್ಮಗುರುಗಳಿಗೆ ಪತ್ರ

dakshina-kannada [1]ಮಂಗಳೂರು: ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ದತೆ ಆರಂಭವಾಗಿದೆ. ರಾಜಕೀಯ ಪಕ್ಷಗಳು ಒಂದೆಡೆ ಚುನಾವಣೆಯ ಅಖಾಡಕ್ಕಿಳಿಯಲು ಸಿದ್ದರಾಗುತ್ತಿದ್ದರೆ , ಇನ್ನೊಂಡೆದೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಪ್ರಯತ್ನ ಆರಂಭಿಸಿದೆ. ಈ ಕುರಿತು ಮುಸ್ಲಿಂ ಧರ್ಮಗುರುಗಳಿಗೆ ಪತ್ರವನ್ನೂ ಬರೆದಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಆಧ್ಯಕ್ಷ ಶಾಹುಲ್ ಹಮೀದ್ ಜಂಟಿಯಾಗಿ ಮುಸ್ಲಿಂ ಧರ್ಮಗುರುಗಳಿಗೆ ಪತ್ರ ಬರೆದಿದ್ದಾರೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಮುಸ್ಲಿಂ ಸಮುದಾಯದ ಶೇಕಡಾ 41.87ರಷ್ಟು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಪರೀಕ್ಷೆ ಬರೆದ ಒಟ್ಟು 8,860 ವಿದ್ಯಾರ್ಥಿಗಳಲ್ಲಿ 2,212 ವಿಧ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಇದು ಆತಂಕದ ವಿಷಯ. ಪ್ರಸ್ತುತ ಸಾಲಿನಲ್ಲಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ. ಇಲಾಖೆಯ ಜತೆಗೆ ಸಮುದಾಯದ ಬೆಂಬಲವೂ ಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯಲು ಮಾರ್ಗದರ್ಶನ ನೀಡಬೇಕೆಂದು ಮುಸ್ಲಿಂ ಸಮುದಾಯದ ಧರ್ಮಗುರುಗಳಿಗೆ ಪತ್ರದ ಮುಖೇನ ವಿನಂತಿಸಲಾಗಿದೆ.ಶುಕ್ರವಾರದ ಪ್ರವಚನದ ವೇಳೆ ಈ ಅಂಶಗಳನ್ನು ಸಮುದಾಯಕ್ಕೆ ಮನವರಿಕೆ ಮಾಡಬೇಕೆಂದು ಪತ್ರದಲ್ಲಿ ಕೋರಲಾಗಿದೆ. ಇದಲ್ಲದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯುವವರೆಗೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಮುಂದೂಡಿ ವಿದ್ಯಾರ್ಥಿಗಳಿಗೆ ನೆರವಾಗುವಂತೆಯೂ ಪತ್ರದಲ್ಲಿ ಕೇಳಿಕೊಳ್ಳಲಾಗಿದೆ.