- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಲ್ಲುಗಳ ಆರೋಗ್ಯ ಕಾಪಾಡಲು ಆರು ಟಿಪ್ಸ್

Teeth [1]

ನೀವು ನಕ್ಕಾಗ ಹೊಳೆಯುವ ದಂತಪಂಕ್ತಿಗಳು ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುತ್ತವೆ. ಸುಂದರ ನಗುವಿಗೆ ಕಾರಣವಾಗುತ್ತದೆ. ಕ್ಷಮಿಸಿ, ಇದು ಯಾವುದೇ ಟೂಥ್ ಪೇಸ್ಟ್ ಜಾಹೀರಾತಲ್ಲ. ಮಾರುಕಟ್ಟೆಯಲ್ಲಿಂದು ಸಾವಿರಾರು ಕೃತಕ ಡೆಂಟಲ್ ಕೇರ್ ಉತ್ಪನ್ನಗಳು ಬರುತ್ತಿವೆ. ಆದರೆ ನಾವು ಹೇಳಹೊರಟದ್ದು ನೀವು ಮನೆಯಲ್ಲಿಯೇ ಮಾಡಬಹುದಾದ ನೈಸರ್ಗಿಕ ಡೆಂಟಲ್ ಕೇರ್ ಬಗ್ಗೆ. ಹಲ್ಲು, ಒಸಡು, ಬಾಯಿಯ ಆರೈಕೆಗೆ ಇದಕ್ಕಿಂತ ಬೆಸ್ಟ್ ಉಪಾಯ ಯಾವುದಿದೆ?

Teeth [2]

ಚಂದದ ನಗುವಿಗೆ ಇಲ್ಲಿದೆ ಟಿಪ್ಸ್

1. ಲವಂಗ : ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟಿರಿಯಾ ಹೊಡೆದೊಡಿಸಿ ಹಲ್ಲನ್ನು ಸುರಕ್ಷಿತವಾಗಿಡಲು ಲವಂಗ ಬಳಸಿ. ಇದು ಆಂಟಿ-ಬ್ಯಾಕ್ಟಿರಿಯಾ ಗುಣಹೊಂದಿದ್ದು ಬಾಯಿಯ ಕೆಟ್ಟ ವಾಸನೆಯನ್ನೂ ಹೋಗಲಾಡಿಸುತ್ತದೆ. ಪ್ರತಿ ಬಾರಿ ಊಟ ಮಾಡಿದ ನಂತರ ಒಂದು ಲವಂಗವನ್ನು ಬಾಯಿಯೊಳಗೆ ಇಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ. ಹಲ್ಲು ನೋವಿಗೆ ಲವಂಗದ ಎಣ್ಣೆ ಉತ್ತಮ ಔಷಧಿ.

2. ಟೂಥ್ ಪೇಸ್ಟ್ : ಮನೆಯಲ್ಲಿಯೇ ಟೂಥ್ ಪೇಸ್ಟ್ ತಯಾರಿಸಿ. ಹೇಗೆ ಮಾಡುವುದೆಂದು ಕೇಳುತ್ತಿದ್ದೀರಾ? ಅಡುಗೆ ಸೋಡಾ 6 ಚಮಚ, 1/3 ಚಮಚ ಉಪ್ಪು, 4 ಚಮಚ ಗ್ಲಿಸರಿನ್ ಮತ್ತು 15 ಹನಿ ಪೆಪ್ಪರ್ ಮಿಂಟ್ ಎಣ್ಣೆಯನ್ನು ಸರಿಯಾಗಿ ಪೇಸ್ಟ್ ಆಗುವರೆಗೆ ಮಿಕ್ಸ್ ಮಾಡಿಟ್ಟುಕೊಳ್ಳಿ. ಪೇಸ್ಟ್ ರೆಡಿ. ಇದನ್ನು ದಿನಾ ಬಳಸುತ್ತಿದ್ದರೆ ನಿಮಗೆ ಆಶ್ಚರ್ಯವಾಗುವಂತೆ ಹಲ್ಲು ಶುಭ್ರವಾಗುತ್ತದೆ. ಇದು ಬಾಯಿಯೊಳಗಿನ ಕ್ರಿಮಿಗಳನ್ನೂ ನಾಶಪಡಿಸುತ್ತದೆ. ಪ್ರತಿದಿನ ಎರಡು ಬಾರಿ ಹಲ್ಲು ಉಜ್ಜುವುದನ್ನು ಮಾತ್ರ ಮರೆಯಬೇಡಿ.

3. ಉಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ : ದಿನಕ್ಕೊಮ್ಮೆ ಉಪ್ಪು ಮತ್ತು ಬೆಳ್ಳುಳ್ಳಿ ಪೇಸ್ಟ್ ನಿಂದ ಬಾಯಿ ಮುಕ್ಕಳಿಸಿ. ಇದರಿಂದ ಒಸಡಿನ ತೊಂದರೆಗಳು ನಿವಾರಣೆಯಾಗುತ್ತದೆ. ಹಲ್ಲು ಕೂಡ ಬಲಿಷ್ಠವಾಗುತ್ತವೆ.

4. ಬೇವಿನ ಕಡ್ಡಿ : ಬಾಯಿಯೊಳಗಿನ ಬ್ಯಾಕ್ಟಿರಿಯಾ ಹೋಗಲಾಡಿಸಲು ಬೇವಿನ ಕಡ್ಡಿಯಿಂದ ಹಲ್ಲುಜ್ಜಿ. ಬೇವಿನ ಕಡ್ಡಿ ಜಗಿಯುವುದರಿಂದ ಹಲ್ಲು ಸದೃಢವಾಗುತ್ತವೆ. ಇದರಿಂದ ಹಲ್ಲು ಹುಳುಕಾಗುವುದು ಕೂಡ ತಪ್ಪುತ್ತದೆ. ಆರಂಭದಲ್ಲಿ ಕಹಿಎನಿಸಬಹುದು. ಆದರೆ ರೂಢಿಯಾಗುವವರೆಗೆ, ಅಷ್ಟೆ.

5. ಮೂಲಂಗಿ ಎಲೆ : ಮೂಲಂಗಿ ಎಲೆ ಕೂಡ ಹಲ್ಲಿನ ಆರೋಗ್ಯಕ್ಕೆ ಸಹಕಾರಿ. ಮೂಲಂಗಿ ಎಲೆ ಜಗಿಯುವುದು ಅಥವಾ ಅದರ ಜ್ಯೂಸ್ ಮಾಡಿ ಕುಡಿಯುವುದು ಹಲ್ಲಿಗೆ ಒಳ್ಳೆಯದು. ಮಾರುಕಟ್ಟೆಗೆ ಹೋದಾಗ ಮೂಲಂಗಿ ಜೊತೆಗಿರುವ ಎಲೆಯನ್ನು ಎಸೆಯಬೇಡಿ. ಎಲೆಯನ್ನು ಹಸಿ ಈರುಳ್ಳಿ ಜೊತೆ ಸಣ್ಣಗೆ ಹೆಚ್ಚಿ ಉಪ್ಪು, ನಿಂಬೆರಸ ಬೆರೆಸಿ ಪಚಡಿ ಮಾಡಿ ತಿನ್ನಬಹುದು. ಹೊಟ್ಟೆಗೂ ಇದು ಒಳ್ಳೆಯದು.

6. ಕ್ಯಾಲ್ಸಿಯಂ : ಕ್ಯಾಲ್ಸಿಯಂ ಜಾಸ್ತಿಯಿರುವ ಆಹಾರದಿಂದ ಹಲ್ಲು ಮತ್ತು ಒಸಡು ಹೆಚ್ಚು ಆರೋಗ್ಯಪೂರ್ಣವಾಗುತ್ತದೆ. ಅದಕ್ಕಾಗಿ ಕಾಳು, ಹಣ್ಣು ತರಕಾರಿಗಳು, ಕೋಳಿ ಮೊಟ್ಟೆ ಮತ್ತು ಡೈರಿ ಉತ್ಪನ್ನಳು ಇತ್ಯಾದಿ ಕ್ಯಾಲ್ಸಿಯಂ ಅತ್ಯಧಿಕವಿರುವ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು.

ಈ ಆರು ಟಿಪ್ಸ್ ಮೂಲಕ ನೀವು ಮನೆಯಲ್ಲಿಯೇ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮಗೆ ನೀವೇ ಡೆಂಟಿಸ್ಟ್ ಆಗಿ. ಇನ್ನೊಂದು ಮಾತು ನೆನಪಿಡಿ. ಆರೋಗ್ಯಕರ ಹಲ್ಲುಗಳು ಹೃದಯಬೇನೆ ಮುಂತಾದ ಅನಾರೋಗ್ಯದಿಂದಲೂ ಕಾಪಾಡುತ್ತವೆ