- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪುತ್ತೂರಿನಲ್ಲಿ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿ ಯಾರೆಂದೇ ಗೊತ್ತಿಲ್ಲ

puttur [1]ಮಂಗಳೂರು: ಕರಾವಳಿಯ ರಾಜಕೀಯ ವಲಯದಲ್ಲಿ ಚುನಾವಣಾ ಕಾವು ಏರ ತೊಡಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ವಿಶಿಷ್ಟ ಕೂತೂಹಲ ಕೆರಳಿಸಿರುವ ಕ್ಷೇತ್ರ ಪುತ್ತೂರು ವಿಧಾನ ಸಭಾ ಕ್ಷೇತ್ರ. ಬಿಜೆಪಿ ಹಾಗೂ ಕಾಂಗ್ರೆಸ್ ನ ನಡುವೆ ಇಲ್ಲಿ ಭಾರೀ ಜಿದ್ದಾಜಿದ್ದಿಯ ಹೋರಾಟ ನಡೆಯುತ್ತಲೇ ಬಂದಿದೆ.

ಪ್ರಸ್ತುತ ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದ್ದು ಶಕುಂತಲಾ ಶೆಟ್ಟಿ ಇಲ್ಲಿನ ಶಾಸಕಿಯಾಗಿದ್ದಾರೆ. ಒಟ್ಟು ಎರಡು ಬಾರಿ ಈ ಕ್ಷೇತ್ರದಿಂದ ಶಕುಂತಲಾ ಶೆಟ್ಟಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ . ಮೊದಲ ಬಾರಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು.

ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕಿಯಾಗಿದ್ದಾರೆ. 2004 ರಲ್ಲಿ ಇವರು ಬಿಜೆಪಿ ಪಕ್ಷದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದು, ಬಳಿಕ ಪಕ್ಷದ ಒಳಗಿನ ಅಸಮಾಧಾನದಿಂದ ಅವರು ಪಕ್ಷ ಬಿಟ್ಟು ಹೊರ ನಡೆದಿದ್ದರು. 2008 ರಲ್ಲಿ ಅವರು ಹಿರಿಯ ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ರಾಮ್ ಭಟ್ ಜೊತೆ ಸೇರಿ ಸ್ವಾಭಿಮಾನಿ ವೇದಿಕೆಯನ್ನು ಹುಟ್ಟು ಹಾಕಿದ್ದು, ಆ ಹೆಸರಿನಲ್ಲಿ ಶಾಸಕಿ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ ಆ ಬಾರಿ ಬಿಜೆಪಿ ಪಕ್ಷದ ಮಲ್ಲಿಕಾ ಪ್ರಸಾದ್ ಶಾಸಕಿಯಾಗಿ ಆಯ್ಕೆಯಾಗಿದ್ದರು.

ಬಳಿಕ ನಡೆದ ಬೆಳವಣಿಗೆಯಲ್ಲಿ ಶಕುಂತಲಾ ಶೆಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಕಳೆದ 2013 ರ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾದರು. ಬಿಜೆಪಿ ಸರಕಾರದ ಆಡಳಿತ ವಿರೋಧಿ ಅಲೆ, ಪಕ್ಷದ ಆಂತರಿಕ ಕಚ್ಚಾಟ ಹಾಗೂ ತಮ್ಮ ಮೇಲಿನ ಜನರ ವಿಶೇಷ ಒಲವಿನಿಂದಾಗಿ ಕಳೆದ ಬಾರಿಯ ಚುನಾವಣೆಯಲ್ಲಿ ಶಕುಂತಲಾ ಶೆಟ್ಟಿ ಜಯ ಸಾಧಿಸಿದ್ದರು.

ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಎದುರು 4289 ಮತಗಳಿಂದ ಶಕುಂತಲಾ ಶೆಟ್ಟಿ ಜಯಬೇರಿ ಬಾರಿಸಿದ್ದರು. 2013ರಲ್ಲಿ ಶಕುಂತಲಾ ಶೆಟ್ಟಿಯವರಿಗೆ ಒಟ್ಟು 66345 ಮತಗಳು ಬಿದ್ದರೆ, ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು 62,056 ಮತಗಳನ್ನಷ್ಟೇ ಪಡೆಯಲು ಶಕ್ತರಾಗಿದ್ದರು.

ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಕ್ಕಲಿಗ (ಗೌಡ), ಬಂಟ ಹಾಗೂ ಬ್ರಾಹ್ಮಣ ಮತಗಳು ನಿರ್ಣಾಯಕವಾಗಿದ್ದು, ಈ ಮೂರು ಸಮುದಾಯಗಳು ಯಾರನ್ನು ಬೆಂಬಲಿಸುತ್ತಾರೋ ಆ ಪಕ್ಷ ಜಯಗಳಿಸುವುದು ಸಾಮಾನ್ಯವಾಗಿದೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಹಾಗೂ ದಲಿತ ಮತಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಈ ಮೂರು ಸಮುದಾಯಗಳ ಮತಗಳು ನಿರ್ಣಾಯಕವಾಗಿದೆ. 2013 ರ ಚುನಾವಣೆಯಂತೆ ಈ ಬಾರಿಯ ಚುನಾವಣೆಯಲ್ಲಿಯೂ ಗೆಲ್ಲುವುದು ಶಕುಂತಲಾ ಶೆಟ್ಟಿಯವರಿಗೆ ಸರಳವಾಗಿಲ್ಲ.

ಶಕುಂತಲಾ ಶೆಟ್ಟಿಯವರ ಕೆಲಸದ ಬಗ್ಗೆ ಯಾವುದೇ ತಕರಾರುಗಳಿಲ್ಲದಿದ್ದರೂ, ರಾಜ್ಯ ಸರಕಾರದ ಕೆಲವು ನೀತಿಗಳು ಈ ಬಾರಿ ಶಕುಂತಲಾ ಶೆಟ್ಟಿಯವರ ಗೆಲುವಿಗೆ ಕೊಂಚ ತೊಂದರೆ ನೀಡುವ ಲಕ್ಷಣಗಳು ಹೆಚ್ಚಾಗಿವೆ. ಒಂದು ಕಡೆಯಲ್ಲಿ ಹಿಂದೂ ಮತಗಳ ಧ್ರುವೀಕರಣ ಹಾಗೂ ಇನ್ನೊಂದು ಕಡೆ ಕಾಂಗ್ರೇಸ್ ಪಕ್ಷದಲ್ಲಿನ ಗುಂಪುಗಾರಿಕೆ ಈ ಬಾರಿ ಪುತ್ತೂರಿನಲ್ಲಿ ಕೈ ಪಕ್ಷಕ್ಕೆ ಬಿಸಿತುಪ್ಪವಾಗುವ ಸಾಧ್ಯತೆ ಇದೆ. ಈ ಭಾಗದ ಕಾಂಗ್ರೇಸ್ ನಲ್ಲಿ ಈಗಾಗಲೇ ಎರಡು ಪ್ರಬಲ ಗುಂಪುಗಳು ಬಹಿರಂಗವಾಗಿಯೇ ಕಚ್ಚಾಡುತ್ತಿದ್ದು, ಶಾಸಕಿ ಶಕುಂತಲಾ ಶೆಟ್ಟಿ ಹಾಗೂ ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಮಧ್ಯೆ ವೈಮನಸ್ಸು ತಾಕರಕ್ಕೇರಿದೆ.

ಇದು ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಮುಳುವಾಗಲಿದೆ ಎಂದೇ ಹೇಳಲಾಗಿದೆ. ಈ ಬಾರಿ ಯಾವುದೇ ಕಾರಣಕ್ಕೂ ಶಕುಂತಲಾ ಶೆಟ್ಟಿಗೆ ಟಿಕೆಟ್ ನೀಡಬಾರದೆಂದು ಹೈಕಮಾಂಡ್ ತನಕ ದೂರು ನೀಡಲಾಗಿದೆ. ಅಲ್ಲದೆ ತಾನೂ ಒಬ್ಬ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಯೆಂದು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿರುವ ಕಾವು ಹೇಮನಾಥ ಶೆಟ್ಟಿಯನ್ನು ಪಕ್ಷ ಯಾವ ರೀತಿಯಲ್ಲಿ ನಿಭಾಯಿಸುತ್ತೆ ಎಂಬ ಲೆಕ್ಕಾಚಾರದ ಮೂಲಕ ಕಾಂಗ್ರೆಸ್ ನ ಗೆಲುವು ಸೋಲು ನಿರ್ಧಾರವಾಗಲಿದೆ. ಕಳೆದ ಬಾರಿ ಶಕುಂತಲಾ ಶೆಟ್ಟಿಯವರನ್ನು ಬೆಂಬಲಿಸಿದ್ದ ಬ್ರಾಹ್ಮಣ ಹಾಗೂ ಬಂಟ ಸಮುದಾಯದ ಮತಗಳು ಈ ಬಾರಿ ಕೈ ತಪ್ಪುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಆದರೆ ಎಲ್ಲರೊಂದಿಗೂ ಬೆರೆತು ಮಾತನಾಡುವುದು ಶಕುಂತಲಾ ಶೆಟ್ಟಿಯವರ ಪ್ಲಸ್ ಪಾಯಿಂಟ್. ಇದು ಅವರದೇ ಪಕ್ಷದ ಕೆಲವರ ಅಸಮಾಧಾನಕ್ಕೂ ಕಾರಣವಾಗಿರುವುದು ಅವರ ಮೈನಸ್ ಪಾಯಿಂಟ್ ಕೂಡಾ ಆಗಿದೆ.

ಬಿಜೆಪಿಯಲ್ಲೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಉದ್ದವಿದೆ. ಒಂದೆಡೆ ಕಳೆದ ಬಾರಿ ಕಾಂಗ್ರೆಸ್ ಎದುರು ಅಲ್ಪ ಮತಗಳ ಅಂತರದಿಂದ ಸೋತ, ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿರುವ ಸಂಜೀವ ಮಠಂದೂರು ಹೆಸರು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಇನ್ನೊಂದೆಡೆ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೆಸರು ಕೂಡಾ ಹರಿದಾಡುತ್ತಿದ್ದು, ಯುವ ಸಮುದಾಯ ಅರುಣ್ ಪುತ್ತಿಲ ಅವರ ಹಿಂದೆ ನಿಂತಿರುವುದು ಬಿಜೆಪಿಯ ಕಳವಳಕ್ಕ್ಕೆ ಕಾರಣವಾಗಿದೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಅವರ ಆತ್ಮೀಯರಾದ ಉದ್ಯಮಿ ಅಶೋಕ್ ಕುಮಾರ್ ರೈ ಕೂಡಾ ಈ ಬಾರಿ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.