- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೋದಿ ಅವರ ಬೆಂಗಳೂರು ಭಾಷಣ ಕೇವಲ ‘ಸಂಡೇ ಶೋ’: ಯು.ಟಿ.ಖಾದರ್

u-t-kader [1]ಮಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣ ಕೇವಲ ‘ಸಂಡೇ ಶೋ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಲೇವಡಿ ಮಾಡಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಿರೀಕ್ಷೆಯಂತೆ ಬೆಂಗಳೂರಿಗೆ ಬಂದ ಪ್ರಧಾನಿ ಮೋದಿ ಒಂದು ತಾಸಿನ ಸುಳ್ಳಿನ ಕಂತೆ ಹೇಳಿ ಮರಳಿದ್ದಾರೆ. ಅವರ ಆಗಮನದಿಂದ ರಾಜ್ಯ ಆಡಳಿತಕ್ಕೆ ಬಲ ಬರುತ್ತದೆಯೇ ಹೊರತು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

“ಅವರ ನಯವಾದ ಸುಳ್ಳನ್ನು ರಾಜ್ಯದ ಬುದ್ಧಿವಂತ ಮತದಾರರು ನಂಬುವುದಿಲ್ಲ. ಮೋದಿಯವರದ್ದು ಬೆಂಗಳೂರಲ್ಲಿ ಕೇವಲ ‘ಸಂಡೇ ಶೋ’,” ಎಂದು ವ್ಯಂಗ್ಯವಾಡಿದರು.

“ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಮೋದಿ ಅವರು ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಟೀಕೆ ಮಾಡಲು ಬಹುಪಾಲು ಸಮಯ ಬಳಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರಕಾರದ ಜನೋಪಯೋಗಿ ಕೆಲಸಗಳು ಅವರಿಗೆ ತಲೆನೋವಾಗಿ ಪರಿಣಮಿಸಿದ್ದು ಅವರ ಬೆಂಗಳೂರು ಭಾಷಣವೇ ಅದಕ್ಕೆ ಸಾಕ್ಷಿ,” ಎಂದು ಖಾದರ್ ಅಭಿಪ್ರಾಯಪಟ್ಟರು.

“ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಭಾರಿ ಭ್ರಷ್ಟಾಚಾರದ ಬಗ್ಗೆ ಮೋದಿ ಅವರಿಗೆ ನೆನಪಾಗದಿರುವುದು ವಿಷಾದನೀಯ,” ಎಂದು ಹೇಳಿದ ಅವರು, “ಕಳಸಾ-ಬಂಡೂರಿ, ಮಹಾದಾಯಿ ಯೋಜನೆಯ ಸಮಸ್ಯೆಯನ್ನು ಕೇಂದ್ರ ಬಗೆಹರಿಸಬೇಕಿತ್ತು. ರಾಜ್ಯ ರೈತರ ಬಗ್ಗೆ ಚಿಂತಿಸಬೇಕಿತ್ತು. ಅದು ಬಿಟ್ಟು ಮೋದಿ ಅವರು ಕೇವಲ ದ್ವೇಷ ರಾಜಕೀಯದ ಭಾಷಣ ಮಾಡಿ ತೆರಳಿದ್ದಾರೆ,” ಎಂದು ಅವರು ಕಿಡಿಕಾರಿದರು.

“ಕರ್ನಾಟಕದಲ್ಲಿ ಕೊಲೆ ರಾಜಕೀಯ ನಡೆಯುತ್ತಿದೆ ಎನ್ನುವ ಅವರು ತಾನು ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ನಡೆದ ನರಮೇಧಗಳ ಬಗ್ಗೆ ಏನನ್ನುತ್ತಾರೆ?” ಎಂದು ಪ್ರಶ್ನಿಸಿದ ಯು.ಟಿ.ಖಾದರ್, “2018ರ ಕರ್ನಾಟಕ ಚುನಾವಣೆ ಹಾಗೂ 2019ರ ಕೇಂದ್ರ ಚುನಾವಣೆಯಲ್ಲಿ ಸಂಘ ಪರಿವಾರಕ್ಕೆ ಜನರು ಉತ್ತರ ನೀಡಲಿದೆ,” ಎಂದು ಹೇಳಿದರು.

ಇದರ ಮುನ್ಸೂಚನೆಯಾಗಿ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಇದು ಪ್ರಜ್ಞಾವಂತ ಮತದಾರರ ಗೆಲುವು ಎಂದು ಅವರು ತಿಳಿಯಬೇಕು. ಭ್ರಷ್ಟಾಚಾರ ಮಾಡಿ ಸಾಲು ಸಾಲಾಗಿ ಜೈಲಿಗೆ ಹೋದ ಅವರ ನಾಯಕತ್ವಕ್ಕೆ ಜನರು ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದರು.