- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಿರಿಯ ಕಾಂಗ್ರೆಸ್ಸಿಗ, ಸಚಿವ ರೈ ಸಂಬಂಧಿ ಸಂಕಪ್ಪ ರೈ ನಿಧನ

sankappa-rai [1]ಮಂಗಳೂರು: ಕಾಂಗ್ರೆಸ್ ಹಿರಿಯ ನಾಯಕ, ಜಿಲ್ಲಾ ಪರಿಷತ್ ಅಧ್ಯಕ್ಷರಾಗಿ ಅವಿಭಜಿತ ಜಿಲ್ಲೆಯಾದ್ಯಂತ ಹೆಸರು ಗಳಿಸಿದ್ದ, ಪುತ್ತೂರು ತಾಲೂಕಿನ ಪ್ರತಿಷ್ಠಿತ ಬೆಳ್ಳಿಪ್ಪಾಡಿ ಮನೆತನದವರಾದ ಬಿ. ಸಂಕಪ್ಪ ರೈ(85) ವಯೋಸಹಜ ಅನಾರೋಗ್ಯದಿಂದಾಗಿ ಇಂದು ಪುತ್ತೂರಿನಲ್ಲಿ ನಿಧನರಾದರು.

ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿಯವರಾದ ಬಿ.ಸಂಕಪ್ಪ ರೈ ಅವರು ಅವಿವಾಹಿತರಾಗಿದ್ದು, ಪುತ್ತೂರು ನಗರದ ಕೊಂಬೆಟ್ಟುವಿನಲ್ಲಿ ತನ್ನ ಮೊಮ್ಮಗನಾದ ಪುತ್ತೂರು ಪೂಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಅವರೊಂದಿಗೆ ವಾಸವಾಗಿದ್ದರು. ಕೆಲ ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ.

ಮಾಣಿ ಕ್ಷೇತ್ರದಿಂದ ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಸಂಕಪ್ಪ, 5 ವರ್ಷಗಳ ಕಾಲ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಪುತ್ತೂರು ತಾಲೂಕು ಬೋರ್ಡ್‌ ಅಧ್ಯಕ್ಷರಾಗಿಯೂ ಅವರು ಜನ ಸೇವೆ ಸಲ್ಲಿಸಿದ್ದರು. ಕೆಎಸ್‌ಆರ್‌ಟಿಸಿ ಮಹಾಮಂಡಲ ಯೂನಿಯನ್ ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಸದಸ್ಯರಾಗಿ ಸಂಕಪ್ಪ ರೈ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. ಕಾಂಗ್ರೆಸ್ ವಲಯದ ಪ್ರಭಾವಿ ನಾಯಕರಾಗಿದ್ದ ಅವರು ಬೆಳ್ಳಿಪ್ಪಾಡಿ ಸಂಕಪ್ಪಣ್ಣ ಎಂದೇ ಚಿರಪರಿಚಿತರಾಗಿದ್ದರು.

ಒಂದು ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಸಂಕಪ್ಪ ರೈ ಮತ್ತೊಮ್ಮೆ ಕಾಂಗ್ರೆಸ್‌ಲ್ಲಿ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧಿಸಿ ಸೋಲು ಕಂಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಸಂಬಂಧಿ ಆಗಿದ್ದ ಬಿ.ಸಂಕಪ್ಪ ರೈ ಅವರು ಹಲವು ಮಂದಿಯನ್ನು ಕಾಂಗ್ರೆಸ್ ನಾಯಕರಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.