- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರೈತರು, ಸರ್ಕಾರಿ ನೌಕರರರಿಗೆ ಸಿಎಂ ಸಿಹಿಸುದ್ದಿ?!

siddaramaih [1]ಬೆಂಗಳೂರು: ಪ್ರಸಕ್ತ ಬಜೆಟ್‍ನಲ್ಲಿ ರಾಜ್ಯದ ರೈತರು ಹಾಗೂ ಸರ್ಕಾರಿ ನೌಕರರಿಗೆ ಬಂಪರ್ ಬಹುಮಾನ ಕಾದಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಸಿಎಂ ಸಿದ್ದರಾಮಯ್ಯ ಚುನಾವಣೆ ಹೊಸ್ತಿಲಲ್ಲಿ ಮಂಡಿಸುತ್ತಿರುವ ಬಜೆಟ್ ಇದಾಗಿದೆ. ಮುಖ್ಯಮಂತ್ರಿಯಾಗಿ ಆರನೇ ಹಾಗೂ ಹಣಕಾಸು ಸಚಿವರಾಗಿ ದಾಖಲೆಯ 13ನೇ ಬಜೆಟ್ ಮಂಡಿಸುತ್ತಿರುವ ಕೀರ್ತಿಗೆ ಸಿಎಂ ಭಾಜನರಾಗಲಿದ್ದು, ಈ ಮಹತ್ವದ ಗಳಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕೃಷಿಕರು ಹಾಗೂ ಸರ್ಕಾರಿ ನೌಕರರನ್ನು ಸಮಾಧಾನಪಡಿಸಲು ಸಿಎಂ ಮುಂದಾಗಿದ್ದಾರೆ.

ರಾಜ್ಯ ಬಜೆಟ್‍ನಲ್ಲಿ ಈ ಎರಡು ವರ್ಗದವರನ್ನು ಸಮಾಧಾನಪಡಿಸುವ ಉತ್ತಮ ಕೊಡುಗೆ ಇರಲಿದೆ ಎನ್ನಲಾಗುತ್ತಿದ್ದು, ರಾಜ್ಯದ ರೈತರ ಸಹಕಾರಿ ಬ್ಯಾಂಕ್ ಸಾಲ ಮನ್ನಾ ಮಾಡುವ ಗಂಭೀರ ಚಿಂತನೆ ಸಿಎಂ ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಎಷ್ಟು ಮೊತ್ತದ ಸಾಲ ಮನ್ನಾ ಮಾಡಲಿದ್ದಾರೆ ಎನ್ನುವುದು ಇದುವರೆಗೂ ತಿಳಿದು ಬಂದಿಲ್ಲ. ಬಜೆಟ್‍ನಲ್ಲಿ ಅಧಿಕೃತ ಘೋಷಣೆ ಆಗಲಿದ್ದು, ಕಳೆದ ಸಾಲಿಗಿಂತ ಹೆಚ್ಚಿನ ಮೊತ್ತವಂತೂ ಮನ್ನಾ ಆಗಲಿದೆ ಎಂದು ಹೇಳಲಾಗುತ್ತಿದೆ.

ರೈತರು ಸಹಕಾರಿ ಬ್ಯಾಂಕ್‍ಗಳು, ನಿಗಮ ಮಂಡಳಿಗಳಲ್ಲಿ ಮಾಡಿರುವ ಸಾಲ ಮನ್ನಾಗೆ ಸಿಎಂ ನಿರ್ಧರಿಸಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 15 ರಿಂದ 17 ಸಾವಿರ ಕೋಟಿ ರೂ. ಹೊರೆ ಬೀಳಲಿದೆ. ಆದರೂ ಬಜೆಟ್‍ನಲ್ಲಿ ಇದನ್ನು ತಂದು, ಎದುರಾಗುವ ಆರ್ಥಿಕ ಕೊರತೆಯನ್ನು ಬಜೆಟ್‍ನಲ್ಲಿ ಸರಿದೂಗಿಸಲು ನಿರ್ಧರಿಸಿದ್ದಾರೆ.

ಇನ್ನೊಂದೆಡೆ ದೊಡ್ಡ ಸಂಖ್ಯೆಯಲ್ಲಿರುವ ಹಾಗೂ ವೇತನ ಹೆಚ್ಚಳಕ್ಕೆ ಭಾರೀ ಹೋರಾಟ ನಡೆಸಿರುವ ಸರ್ಕಾರಿ ನೌಕರರನ್ನು ಒಂದಿಷ್ಟು ಸಮಾಧಾನಿಸಲು ಸಿಎಂ ಮುಂದಾಗಿದ್ದಾರೆ. ಬಹುದಿನದ ಬೇಡಿಕೆಯಾದ ವೇತನ ಹೆಚ್ಚಳಕ್ಕೆ ಸಿಎಂ ಮುಂದಾಗಿದ್ದು ಶೇ.30ರಷ್ಟು ಹೆಚ್ಚಳವನ್ನು ಬಜೆಟ್‍ನಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಆರನೇ ವೇತನ ಆಯೋಗದ ಶಿಫಾರಸಿನಂತೆ ಶೇ.30ರಷ್ಟು ಹೆಚ್ಚಳಕ್ಕೆ ಸಿಎಂ ನಿರ್ಧರಿಸಿದ್ದಾರೆ. ಆದರೆ ಶೇ.45ರಷ್ಟು ವೇತನ ಹೆಚ್ಚಳ ಬೇಡಿಕೆ ಮುಂದಿಟ್ಟಿರುವ ನೌಕರರು ಇದರಿಂದ ತೃಪ್ತಿಹೊಂದುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

ಮತದಾರರ ಒಲವು ಗಳಿಸುವುದನ್ನೇ ಪ್ರಮುಖ ಉದ್ದೇಶವಾಗಿಟ್ಟುಕೊಂಡಿರುವ ಸಿಎಂ ಸಿದ್ದರಾಮಯ್ಯ ಕೇವಲ ಜನಪ್ರಿಯ ಘೋಷಣೆಗಳಿಗೆ ಈ ಸಾರಿಯ ಬಜೆಟ್‍ನ್ನು ಸೀಮಿತವಾಗಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸದ ಮೇಲೆ ಕೂಡ ಹೊರೆಯಾಗಲಿದ್ದು, ಇದನ್ನು ಸರಿದೂಗಿಸಿಕೊಳ್ಳಲು ಕೂಡ ಅವರು ಪ್ಲಾನ್ ಮಾಡಿಕೊಂಡಿದ್ದಾರೆ. ವಿವಿಧ ಇಲಾಖೆಗಳಿಗೆ ನೀಡುವ ಅನುದಾನವನ್ನು ಕಡಿತಗೊಳಿಸಿ ಬಜೆಟ್ ಮೇಲಿನ ಹೊರೆ ತಪ್ಪಿಸಲಿದ್ದು, ಈ ಬಗ್ಗೆ ಆಯಾ ಇಲಾಖೆ ಸಚಿವರಿಗೆ ಬಜೆಟ್ ಪೂರ್ವಬಾವಿ ಸಭೆಯಲ್ಲಿ ಸ್ಪಷ್ಟಪಡಿಸಲಿದ್ದಾರೆ.