ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕಕ್ಕೆ ಮಂಗಳೂರಿನ ಛತ್ರತ್ರಯ !

5:51 PM, Thursday, February 15th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

shravanabelagolaಮಂಗಳೂರು: ಶ್ರವಣಬೆಳಗೊಳ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಸರ್ವ ಸಿದ್ಧತೆಗಳು ನಡೆಯುತ್ತಿದ್ದು, ಅಟ್ಟಳಿಗೆಯ ತುದಿಯಲ್ಲಿ, ಶ್ರೀ ಬಾಹುಬಲಿಯ ಶಿರದ ಮೇಲೆ ಮಂಗಳೂರಿನಲ್ಲಿ ತಯಾರಿಸಿದ ಛತ್ರತ್ರಯ ಕಂಗೊಳಿಸುತ್ತಿದೆ.

ಮಂಗಳೂರಿನ ರಥಬೀದಿಯ ಗೋವರ್ಧನ ಮೆಟಲ್‌ ಹೌಸ್‌ನ ಮಾಲಕರಾದ ಶಿವಪ್ರಸಾದ್‌ ಅವರ ತಾಂತ್ರಿಕ ಮೇಲ್ವಿಚಾರಣೆ ಹಾಗೂ ನಿರ್ದೇಶನದಂತೆ ಛತ್ರತ್ರಯವನ್ನು ಸಿದ್ಧಪಡಿಸಲಾಗಿದೆ. ಈ ಮೊದಲು ನಡೆದ ಮಹಾಮಸ್ತಕಾಭಿಷೇಕಕ್ಕೂ ಛತ್ರತ್ರಯಗಳನ್ನು ಅಳವಡಿಸುವ ಕಾರ್ಯವನ್ನು ಮಂಗಳೂರಿನ ಇವರ ನೇತೃತ್ವದ ತಂಡವೇ ನಿರ್ವಹಿಸಿದೆ.

ತಾಮ್ರದ ಜಾಲಿಯಲ್ಲಿ ಹಿತ್ತಾಳೆಯ ಸೂಕ್ಷ್ಮ ಕುಸುರಿ ಕೆತ್ತನೆ ಮಾಡಿದ ಈ ಛತ್ರಿಗಳಿಗೆ ಬಳಿಕ ಬಂಗಾರದ ಲೇಪನ ಮಾಡಲಾಗಿದೆ. ಮೂರು ಛತ್ರಿಗಳನ್ನು ಒಂದರ ಮೇಲೊಂದು ಅಳವಡಿಸಲಾಗಿದ್ದು ಕೆಳಗಿನ ಛತ್ರಿಯು ಹದಿನೆಂಟು ಅಡಿ, ಮಧ್ಯದಲ್ಲಿನ ಛತ್ರಿಯು ಹನ್ನೆರಡು ಅಡಿ ಹಾಗೂ ಮೇಲಿರುವ ಛತ್ರಿಯು ಒಂಬತ್ತು ಅಡಿಗಳಷ್ಟು ಅಗಲ ಇದ್ದು ಇವೆಲ್ಲದರ ಮೇಲೆ ಬಂಗಾರದ ಕಲಶವನ್ನು ಅಳವಡಿಸಲಾಗಿದೆ. ಈ ಛತ್ರಿಗಳ ಭಾರ ಬರೋಬ್ಬರಿ 1,250 ಕೆ.ಜಿ.! ಇದಕ್ಕೆ 28 ಕುಶಲ ಕರ್ಮಿಗಳನ್ನೊಳಗೊಂಡ ತಂಡ ಸುಮಾರು ನಾಲ್ಕು ತಿಂಗಳಿಂದ ಕೆಲಸ ನಿರ್ವಹಿಸಿದೆ ಎಂದು ಕಾರ್‌ಸ್ಟ್ರೀಟ್‌ನ ಪ್ರಶಾಂತ್‌ ನಾಯಕ್‌ ಅವರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಮಂಗಳೂರಿನಲ್ಲಿ ಸುಮಾರು 46 ವರ್ಷಗಳಿಂದ ವ್ಯವಹಾರ ನಡೆಸುತ್ತಿರುವ ಗೋವರ್ಧನ್‌ ಮೆಟಲ್‌ ಹೌಸ್‌ ಕರಾವಳಿ ಭಾಗದ ಹಲವು ದೇವಸ್ಥಾನ ಹಾಗೂ ದೈವಸ್ಥಾನಗಳಿಗೆ ತಾಮ್ರದ ಮೇಲ್ಛಾವಣಿ, ದೀಪ ಹಾಗೂ ಇನ್ನಿತರ ಪೂಜಾ ಸಾಮಗ್ರಿಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿದ್ದು ಭಗವಾನ್‌ ಶ್ರೀ ಬಾಹುಬಲಿಯ ಮಸ್ತಕಾಭಿಷೇಕಕ್ಕೆ ಛತ್ರತ್ರಯವನ್ನು ತಯಾರಿಸಿ ಅಳವಡಿಸುವ ಕಾರ್ಯ ತಮಗೆ ದೊರೆತದ್ದು ನಮ್ಮೆಲ್ಲರ ಭಾಗ್ಯ ಎನ್ನುತ್ತಾರೆ ಶಿವಪ್ರಸಾದ್‌.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English