- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಾರ್ಚ್ ಮೊದಲ ವಾರದಲ್ಲಿ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿರುವ ರಾಹುಲ್ ಗಾಂಧಿ

karavali [1]ಮಂಗಳೂರು : ನಾಲ್ಕು ದಿನಗಳ ಹೈದರಾಬಾದ್ ಕರ್ನಾಟಕ ಪ್ರವಾಸ ಮುಗಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು, ಎರಡನೇ ಹಂತದಲ್ಲಿ ಫೆ.24ರಿಂದ ಮೂರು ದಿನಗಳ ಮುಂಬೈ ಕರ್ನಾಟಕದಲ್ಲಿ ಸಂಚರಿಸಿದ ನಂತರ, ಮೂರನೇ ಹಂತದಲ್ಲಿ ಮಾರ್ಚ್ ನಲ್ಲಿ ಕರಾವಳಿಗೆ ಕಾಲಿಡಲಿದ್ದಾರೆ. ಮಾರ್ಚ್ ತಿಂಗಳ ಮೊದಲ ವಾರದಲ್ಲಿ ರಾಹುಲ್ ಗಾಂಧಿ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ನಡೆಸಲಿದ್ದಾರೆ.

4 ದಿನಗಳ ಕಾಲ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿರುವ ರಾಹುಲ್ ಗಾಂಧಿ ಅಲ್ಲಲ್ಲಿ ರೋಡ್ ಶೋ, ಸಾರ್ವಜನಿಕರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಫೆ.24ರಿಂದ ಮತ್ತೆ ರಾಹುಲ್ ಗಾಂಧಿ ರಾಜ್ಯ ಪ್ರವಾಸ ರಾಹುಲ್ ಭೇಟಿಯೊಂದಿಗೆ ಕರಾವಳಿಯಲ್ಲಿ ಕಾಂಗ್ರೆಸ್ ಚುನಾವಣೆಯ ಪ್ರಚಾರ ಪರ್ವ ಚುರುಕು ಪಡೆಯಲಿದೆ. ಒಂದೆಡೆ ಬಿಜೆಪಿ ಕರಾವಳಿ ಜಿಲ್ಲೆಗಳಲ್ಲಿ ಚುನಾವಣಾ ರಣತಂತ್ರ ಹೆಣೆಯುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಕೂಡ ಮತದಾರರನ್ನು ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದೆ.

ಹೈದರಾಬಾದ್ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಅವರಿಗೆ ಮಿರ್ಚಿ, ಮಂಡಕ್ಕಿ ಉತ್ತರ ಕರ್ನಾಟಕದ ಸವಿರುಚಿ ಪರಿಚಯಿಸಿದ್ದರೆ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಗೋಳಿಬಜೆ, ಪತ್ರೊಡೆ, ಕಲ್ಲಡ್ಕ ಕೆಟಿ ರಾಹುಲ್ ಅವರಿಗೆ ಕರಾವಳಿಯ ತಿನಿಸುಗಳ ರುಚಿ ಪರಿಚಯಿಸಲಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಿಗೂ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದ್ದು, ಅವರೊಂದಿಗೆ ರಾಜ್ಯ ಹಾಗು ರಾಷ್ಟ್ರಮಟ್ಟದ ನಾಯಕರು ಭಾಗಿಯಾಗಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ರಾಹುಲ್ ಗಳಿಸಿದ ಪ್ರೀತ್ಯಾದರದ ಥರಾವರಿ ಚಿತ್ರಗಳು ಕರಾವಳಿಯ ಉಭಯ ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ, ವಿಶೇಷವಾಗಿ ಸಿದ್ದಪಡಿಸಲಾಗಿರುವ ಬಸ್ ಮೂಲಕ ಸಂಚರಿಸಲಿದ್ದಾರೆ.

ಈ ಸಂದರ್ಭದಲ್ಲಿ ಉಡುಪಿ ಹಾಗು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೃಹತ್ ಸಮಾವೇಶಗಳನ್ನು ಆಯೋಜಿಸಲು ಸಿದ್ದತೆ ನಡೆಸಲಾಗುತ್ತಿದೆ. ರಾಹುಲ್ ಭೇಟಿಯ ಸಂಪೂರ್ಣ ರೂಪುರೇಷೆ ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಈ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬರುವ ಫೆಬ್ರವರಿ 19ರಿಂದ 3 ದಿನಗಳ ಕಾಲ ಕರಾವಳಿಯ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಲು ಬಿಜೆಪಿ ನಾಯಕರು ಸಿದ್ದರಾಗುತ್ತಿದ್ದಾರೆ.