- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪೊಲೀಸ್‌ ಫೋನ್‌ ಇನ್‌

police [1]ಮಂಗಳೂರು : ಬಲ್ಮಠ ನ್ಯೂ ರೋಡ್‌ನ‌ಲ್ಲಿ ಪೊಲೀಸರು ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ಏಕ ಮುಖ ವಾಹನ ಸಂಚಾರ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದ್ದು, ಶುಕ್ರವಾರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಈ ಕುರಿತಂತೆ ಹಲವಾರು ಮಂದಿ ಕರೆ ಮಾಡಿ ತಮ್ಮ ಅಹವಾಲುಗಳನ್ನು ಮಂಡಿಸಿದರು.

ಈ ರಸ್ತೆಯಲ್ಲಿ ಫಳ್ನೀರ್‌ನ ಅವೇರಿ ಜಂಕ್ಷನ್‌ನಿಂದ ಜ್ಯೋತಿ ಜಂಕ್ಷನ್‌ ಕಡೆಗೆ ವಾಹನ ಸಂಚಾರವನ್ನು ನಿಷೇಧಿಸಿರುವುದರಿಂದ ತಮಗೆ ಜ್ಯೋತಿ ಜಂಕ್ಷನ್‌ ಕಡೆಗೆ ಹೋಗಲು ಸುಮಾರು ಒಂದು ಕಿಲೋ ಮೀಟರ್‌ ಸುತ್ತು ಬಳಸಿ ತೆರಳಬೇಕಾಗಿದೆ. ಕೆಲವು ಸಿಗ್ನಲ್‌ಗ‌ಳನ್ನು ದಾಟಿ ಹೋಗ ಬೇಕಾಗಿರುವುದರಿಂದ ಬಹಳಷ್ಟು ಸಮಯ ಹಿಡಿಯುತ್ತದೆ ಎಂದು ಫೋನ್‌ ಕರೆ ಮಾಡಿದ ಈ ರಸ್ತೆಯ ಎರಡೂ ಬದಿ ಇರುವ ವಿವಿಧ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ತಿಳಿಸಿದರು.

ಫೋನ್‌ ಕರೆ ಸ್ವೀಕರಿಸಿದ ಡಿಸಿಪಿ ಹನುಮಂತರಾಯ ಅವರು, ಬಲ್ಮಠ ನ್ಯೂ ರೋಡ್‌ನ‌ಲ್ಲಿ ಈಗ ಪ್ರಾಯೋಗಿಕವಾಗಿ ವನ್‌ ವೇ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಇದರ ಸಾಧಕ- ಬಾಧಕಗಳ ಅಧ್ಯಯನ ನಡೆಸಲಾಗುತ್ತಿದೆ.

ಈ ಹಿಂದಿನ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕೆಲವು ಜನರು ಕರೆ ಮಾಡಿ ಜ್ಯೋತಿ ಜಂಕ್ಷನ್‌ನಲ್ಲಿ ಟ್ರಾಫಿಕ್‌ ಜಾಂ ಉಂಟಾಗುತ್ತಿದ್ದು, ಬಲ್ಮಠ ನ್ಯೂ ರೋಡ್‌ ಮೂಲಕ ಬರುವ ವಾಹನಗಳೇ ಇದಕ್ಕೆ ಕಾರಣ ಎಂದು ತಿಳಿಸಿ ಈ ರಸ್ತೆಯಲ್ಲಿ ಏಕ ಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸುವಂತೆ ಸಲಹೆ ಮಾಡಿದ್ದರು. ಆದ್ದರಿಂದ ಪ್ರಾಯೋಗಿಕವಾಗಿ ಈ ರಸ್ತೆಯಲ್ಲಿ ಏಕಮುಖ ಸಂಚಾರವನ್ನು ಆರಂಭಿಸಲಾಗಿದೆ ಎಂದರು.

ಬಹುಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗಿದ್ದು, ಅಧಿಕ ಮಂದಿ ಸಾರ್ವಜನಿಕರಿಗೆ ಅನುಕೂಲವಾಗುವುದಾದರೆ ಯಾವುದೇ ಹೊಸ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಅವಕಾಶವಿದೆ. ಈ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಡಿಸಿಪಿ ತಿಳಿಸಿದರು.

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿರುವ ರಿಕ್ಷಾ ಪ್ರೀ ಪೇಯ್ಡ ಆಟೋ ರಿಕ್ಷಾ ಕೌಂಟರ್‌ ದಿನದ 24 ಗಂಟೆ ಕಾಲವೂ
ಕಾರ್ಯ ನಿರ್ವಹಿಸುವಂತಾಗಬೇಕು ಎಂಬ ಬೇಡಿಕೆ ಸಾರ್ವಜನಿಕರಿಂದ ಬಂತು. ಇದೀಗ ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ರಾತ್ರಿ ಮತ್ತು ಬೆಳಗ್ಗಿನ ವೇಳೆ ಆಗಮಿಸುವ ರೈಲುಗಳಲ್ಲಿ ಬರುವ ಪ್ರಯಾಣಿಕರಿಗೆ ಇದರ ಪ್ರಯೋಜನ ಲಭಿಸುತ್ತಿಲ್ಲ. ಅವರು ದುಬಾರಿ ಬಾಡಿಗೆ ಪಾವತಿಸಿ ಆಟೋ ರಿಕ್ಷಾಗಳಲ್ಲಿ ಪ್ರಯಾಣಿಸ ಬೇಕಾಗಿದೆ ಎಂದು ಸಾರ್ವಜನಿಕರು ತಿಳಿಸಿದರು.

ಇದಕ್ಕೆ ಉತ್ತರಿಸಿದ ಡಿಸಿಪಿ ಹನುಮಂತರಾಯ ಅವರು, ಈಗಿರುವ ಪ್ರೀ ಪೇಯ್ಡ ರಿಕ್ಷಾ ಕೌಂಟರ್‌ ಆರ್‌ಟಿಒ ಮತ್ತು ರೈಲ್ವೆ ಇಲಾಖೆಯವರ ಮೇಲೆ ಒತ್ತಡ ತಂದು ಆರಂಭಿಸಲಾಗಿದೆ. ರಾತ್ರಿ 8ರಿಂದ ಬೆಳಗ್ಗಿನ 8 ಗಂಟೆ ವರೆಗಿನ ಅವಧಿಯಲ್ಲಿ ಈ ಕೌಂಟರ್‌ ಕಾರ್ಯಾಚರಿಸಲು ಇರುವ ಅಡಚಣೆಗಳ ಬಗ್ಗೆ ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಒಂದು ಕಡೆ ಓಲಾ ಮತ್ತು ಉಬಾರ್‌ ಕಂಪೆನಿಗಳ ಪರವಾಗಿ ಸಾರ್ವಜನಿಕರು ಮಾತನಾಡಿದರೆ, ಇನ್ನೊಂದು ಕಡೆ ಸಾಮಾನ್ಯ ಟ್ಯಾಕ್ಸಿ ಚಾಲಕ/ಮಾಲಕರು ಓಲಾ ಮತ್ತು ಉಬಾರ್‌ ಟ್ಯಾಕ್ಸಿಗಳ ವಿರುದ್ಧ ಮಾತನಾಡಿದರು. ಓಲಾ ಮತ್ತು ಉಬಾರ್‌ ಟಾಕ್ಸಿಗಳು ಅಧಿಕ ಸಂಖ್ಯೆಯಲ್ಲಿ ಬೇಕಾ ಬಿಟ್ಟಿಯಾಗಿ ನಗರದಲ್ಲಿ ಸಂಚರಿಸುತ್ತಿರುವುದರಿಂದ ತಮಗೆ ಬಾಡಿಗೆ ಸಮಸ್ಯೆ ಎದುರಾಗಿದೆ. ಬಾಡಿಗೆಯ ಕೊರತೆಯಿಂದಾಗಿ ಸಾಲ ಪಡೆದು ಖರೀದಿಸಿದ ಟ್ಯಾಕ್ಸಿಗಳ ಕಂತು ಪಾವತಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಓಲಾ ಸಂಚಾರಕ್ಕೆ ಮಿತಿ ಹೇರಬೇಕು ಎಂದು ಟ್ಯಾಕ್ಸಿ ಚಾಲಕ/ ಮಾಲಕರು ಒತ್ತಾಯಿಸಿದರು.

ಓಲಾ, ಉಬಾರ್‌ ಟ್ಯಾಕ್ಸಿಗಳು ಅಧಿಕ ಸಂಖ್ಯೆಯಲ್ಲಿ ಓಡಾಡುತ್ತಿವೆ ಎಂಬ ಅನಿಸಿಕೆ ಇದ್ದರೆ ಈ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು ಎಂದು ಡಿಸಿಪಿ ತಿಳಿಸಿದರು. ಇದು 71ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 26 ಕರೆಗಳು ಬಂದವು. ಡಿಸಿಪಿ ಉಮಾ ಪ್ರಶಾಂತ್‌, ಎಸಿಪಿ ವೆಲೆಂಟೈನ್‌ ಡಿ’ಸೋಜಾ, ಟ್ರಾಫಿಕ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಶಿವ ಪ್ರಕಾಶ್‌ ಮತ್ತು ಎ.ಎ. ಅಮಾನುಲ್ಲಾ, ಸಬ್‌ ಇನ್‌ಸ್ಪೆಕ್ಟರ್‌ ಚಂದ್ರ, ಎಎಸ್‌ಐ ಯೂಸುಫ್‌, ಹೆಡ್‌ಕಾನ್ಸ್ಟೆಬಲ್‌ ಪುರುಷೋತ್ತಮ ಉಪಸ್ಥಿತರಿದ್ದರು.

ಆನ್‌ಲೈನ್‌ ವ್ಯವಸ್ಥೆಯ ಮೂಲಕ ಕಾರ್ಯಾಚರಿಸುವ ಓಲಾ, ಉಬಾರ್‌ ಟ್ಯಾಕ್ಸಿಗಳಿಗೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಪಿಕ್‌ ಅಪ್‌ ಮಾಡಲು ಅವಕಾಶ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ ಓಲಾ ಮತ್ತು ಉಬಾರ್‌ ಟ್ಯಾಕ್ಸಿಗಳಿಗೆ ವಿಮಾನ ನಿಲ್ದಾಣದಿಂದ ಪಿಕ್‌ಅಪ್‌ ಮಾಡಲು ಅಡ್ಡಿ ಉಂಟು ಮಾಡುವ ಇತರ ಟ್ಯಾಕ್ಸಿ ಚಾಲಕರಿಗೆ ಎಚ್ಚರಿಕೆ ನೀಡುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಲಾಗುವುದು ಎಂದರು.