- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಿಜೆಪಿಯವರು ಚುನಾವಣಾ ಆಯೋಗವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರಾ?

u-t-kader [1]ಮಂಗಳೂರು: ರಾಜ್ಯದ ವಿಧಾನಸಭೆ ಚುನಾವಣೆ ಘೋಷಣೆಯ ದಿನಾಂಕವನ್ನು ಮಾರ್ಚ್‌ ಅಂತ್ಯದವರೆಗೆ ಮುಂದೂಡುವಂತೆ ಆಹಾರ ಸಚಿವ ಯು.ಟಿ. ಖಾದರ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಚುನಾವಣೆ ಘೋಷಣೆ ದಿನಾಂಕವನ್ನು ಮುಂದೂಡಿದಂತೆ ಇಲ್ಲಿಯೂ ಮುಂದೂಡಬೇಕು. ಗುಜರಾತ್‌‌ನಲ್ಲಿ ಕೇವಲ 20 ದಿನ ಇರುವಾಗ ಹಾಗೂ ಹಿಮಾಚಲ ಪ್ರದೇಶದಲ್ಲಿ 30 ದಿನ ಇರುವಾಗ ಚುನಾವಣೆ ಘೋಷಣೆಯಾಗಿತ್ತು. ಇನ್ನು ಚುನಾವಣೆಗೆ ಒಂದು ವಾರ ಇರುವಾಗ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿತ್ತು ಎಂದರು.

ಚುನಾವಣಾ ಘೋಷಣೆಯನ್ನು ಮುಂದೂಡಿದರೆ ಈಗಾಗಲೇ ಟೆಂಡರ್‌‌ ಹಂತದಲ್ಲಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಆರಂಭಿಸಲು ಅನುಕೂಲವಾಗುತ್ತದೆ. ನಿಗದಿತ ಅವಧಿಗಿಂತ ಆರು ತಿಂಗಳು ಮುಂಚಿತವಾಗಿ ಚುನಾವಣೆ ಘೋಷಿಸಲು ಆಯೋಗಕ್ಕೆ ಅವಕಾಶವಿದ್ದರೂ ತುರ್ತಾಗಿ ಘೋಷಿಸಬೇಕೆಂದಿಲ್ಲ ಎಂದರು.

ಮುಂದಿನ ತಿಂಗಳಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತದೆ. ಹಾಗಿರುವಾಗ ಸರ್ಕಾರಕ್ಕೆ ಬಜೆಟ್ ಮಂಡಿಸುವ ಅಗತ್ಯವಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಇವರಿಬ್ಬರು ಚುನಾವಣಾ ಆಯೋಗವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರಾ? ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.