- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಒಳಚರಂಡಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ಸಮಗ್ರ ತನಿಖೆಗೆ ಒತ್ತಾಯಿಸಿ ಸಿಪಿಐ(ಎಂ)ನಿಂದ ನಗರಪಾಲಿಕೆ ಚಲೋ

corporation [1]ಮಂಗಳೂರು: ಕುಡ್ಸೆಂಪ್ (ಒಳಚರಂಡಿ) ಯೋಜನೆಯಲ್ಲಿ ನಡೆದ ಭ್ರಷ್ಟಾಚಾರವನ್ನು ಉನ್ನತ ತನಿಖೆಗೆ ಒತ್ತಾಯಿಸಿ, ಅಮೃತ್ ಯೋಜನೆಯಿಂದ ಭ್ರಷ್ಟ ಗುತ್ತಿಗೆದಾರರನ್ನು ಹೊರಗಿಡಲು ಆಗ್ರಹಿಸಿ ಹಾಗೂ ನಿಯಮ ಉಲ್ಲಂಘಿಸಿ ನಡೆದಿರುವ ನಗರದ ಹೊಸ ಪಂಪ್‌ಲೈನ್ ಕಾಮಗಾರಿ ಗುತ್ತಿಗೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸಿಪಿಐ(ಎಂ) ನೇತೃತ್ವದಲ್ಲಿ ನಗರದಲ್ಲಿ ಇಂದು (ತಾ. 20-02-2018) ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.

ಬಲ್ಲಾಳ್‌ಬಾಗ್‌ನಿಂದ ಮೆರವಣಿಗೆಯಲ್ಲಿ ಹೊರಟ ಸಿಪಿಐ(ಎಂ) ಪಕ್ಷದ ನೂರಾರು ಕಾರ್ಯಕರ್ತರು, ’ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಶಾಸಕರಿಗೆ ಧಿಕ್ಕಾರ, ಕುಡ್ಸೆಂಪ್ ಹಗರಣ ಮಂಗಳೂರು ನಗರಕ್ಕೊಂದು ಕಪ್ಪು ಚುಕ್ಕೆ, ಕೋಟ್ಯಾಂತರ ಹಣವನ್ನು ನುಂಗಿ ಹಾಕಿದ ಭ್ರಷ್ಟರನ್ನು ಜೈಲಿಗಟ್ಟಿ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿದ ಡಿವೈಎಫ್‌ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳರವರು, ವಿದೇಶೀ ಬ್ಯಾಂಕ್ ಸಾಲದಿಂದ ರೂಪಿಸಿದ ಅಭಿವೃದ್ಧಿ ಯೋಜನೆಗಳು ಮಂಗಳೂರಿನ ನಾಗರಿಕರ ಪಾಲಿಗೆ ಯಮಪಾಶವಾಗುತ್ತಿದೆ. ಒಂದೆಡೆ ಎ.ಡಿ.ಬಿ. ಷರತ್ತಿನಂತೆ ತೆರಿಗೆಗಳು ಹೆಚ್ಚಳವಾಗುತ್ತಿದೆ. ಇನ್ನೊಂದೆಡೆ ಎ.ಡಿ.ಬಿ. ಒಳಚರಂಡಿ ಕಾಮಗಾರಿಗಳಲ್ಲಿ ಅಪಾರ ಭ್ರಷ್ಟಾಚಾರ ನಡೆಸಲಾಗಿದೆ. ಭ್ರಷ್ಟಾಚಾರದಿಂದಾಗಿ ಒಳಚರಂಡಿ ವ್ಯವಸ್ಥೆ ಬಳಕೆಗೆ ಅಯೋಗ್ಯವಾದರೆ ಎ.ಡಿ.ಬಿ. ಸಾಲದ ಕಂತು ಕಟ್ಟಲು ಜನರ ತಲೆಯ ಮೇಲೆ ಹೊಸ ತೆರಿಗೆಗಳನ್ನು ಏರಿಸಲಾಗುತ್ತಿದೆ.

ಕುಡ್ಸೆಂಪ್ ಹಗರಣ ಮಂಗಳೂರು ಕಂಡ ಅತ್ಯಂತ ದೊಡ್ಡ ಹಗರಣದಲ್ಲಿ ನಗರದ ಶಾಸಕರುಗಳಾದ ಮೊದಿನ್ ಬಾವಾ ಹಾಗೂ ಜೆ.ಆರ್. ಲೋಬೋರವರು ಶಾಮೀಲಾಗಿ ನಡೆಯಲು ಅಸಾಧ್ಯ. 2002ರಲ್ಲಿ ಎ.ಡಿ.ಬಿ. ಯೋಜನೆ ಮಂಗಳೂರಿಗೆ ಬಂದಾಗ ಲೋಬೋರವರು ಪಾಲಿಕೆಯ ಕಮಿಷನರ್ ಆಗಿದ್ದರು.

ನಂತರ ಕುಡ್ಸೆಂಪ್ ಯೋಜನಾ ನಿರ್ದೇಶಕರಾಗಿ ಜವಾಬ್ದಾರಿ ಹೊತ್ತಿದ್ದರು. ಲೋಬೋ ಹುದ್ದೆಗೆ ರಾಜೀನಾಮೆ ನೀಡಿ ಶಾಸಕರಾಗುವುದರ ಹಿಂದೆ ವಿದೇಶಿ ಬ್ಯಾಂಕ್ ಎ.ಡಿ.ಬಿ.ಯ ಲಾಬಿ ಇದೆ. ಲೋಬೋರವರು ಎ.ಡಿ.ಬಿ. ಸಹಿತ ನಗರದ ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುವ ಭ್ರಷ್ಟ ಅಧಿಕಾರಿಗಳು, ಗುತ್ತಿಗೆದಾರರು ಕನ್ಸಲ್ಟೆನ್ಸಿಗಳ ಪ್ರತಿನಿಧಿಯಾಗಿ ಶಾಸಕರಾಗಿದ್ದಾರೆಯೇ ಹೊರತು ನಗರದ ಜನರ ಪ್ರತಿನಿಧಿಯಾಗಿ ಅಲ್ಲ.

ಎ.ಡಿ.ಬಿ. ೨ನೇ ಹಂತದ ಯೋಜನೆಗಳ ಟೆಂಡರ್ ಪ್ರಕ್ರಿಯೆಯಲ್ಲೇ ಬೃಹತ್ ಮೊತ್ತದ ಅವ್ಯವಹಾರಗಳು ನಡೆದದ್ದು ಇದರಲ್ಲಿ ಲೋಬೊ ಹಾಗೂ ಮೊದಿನ್ ಬಾವಾ ಇಬ್ಬರೂ ಶಾಮೀಲಾಗಿದ್ದಾರೆ. ಇವರು ಪರಿಶುದ್ಧರಾಗಿದ್ದರೆ ಅವ್ಯವಹಾರದ ಕುರಿತು ತನಿಖೆಗಾಗಿ ಮಾನ್ಯ ಮುಖ್ಯಮಂತ್ರಿಗೆ ಪತ್ರ ಬರೆಯಲಿ ಹಾಗೂ ಒತ್ತಡ ಹಾಕಲಿ ಎಂದು ಸವಾಲು ಹಾಕಿದರು.

ಸಿಪಿಐ(ಎಂ) ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್‌ಕುಮಾರ್ ಬಜಾಲ್‌ರವರು ಮಾತನಾಡುತ್ತಾ, ಮೊದಲ ಹಂತದ ೩೫೦ ರೂಪಾಯಿ ಕೋಟಿ ಹಣವನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿದ ಕುಡ್ಸೆಂಪ್ ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳು ಸೇರಿದಂತಹ ದುಷ್ಟರ ಕೂಟ, ಈಗ ಮತ್ತೆ ೨ನೇ ಹಂತದ 410 ಕೋಟಿ ಹಣವನ್ನು ತಂದು ಮತ್ತೆ ಭ್ರಷ್ಟಾಚಾರವನ್ನು ನಡೆಸಲು ತುದಿಗಾಲಲ್ಲಿ ನಿಂತಿದೆ.

ಮೊದಲ ಹಂತದ ಹಣದಲ್ಲಿ ಜನತೆಯ ಮೇಲೆ ಸ್ವಯಂಘೋಷಿತ ಆಸ್ತಿ ತೆರಿಗೆಯಂತಹ ಹೊರೆಯನ್ನು ಹಾಕಿದ ನಗರ ಪಾಲಿಕೆ ಪ್ರಸ್ತುತ ಯಾವುದೇ ರೀತಿಯ ಮುನ್ಸೂಚನೆ ನೀಡದೆ ಜನರನ್ನು ಕತ್ತಲೆ ಕೋಣೆಯಲ್ಲಿಟ್ಟಿದೆ. ವಿರೋಧ ಪಕ್ಷವಾದ ಬಿಜೆಪಿ ಇಂತಹ ಮಹಾನ್ ಹಗರಣದ ಬಗ್ಗೆ ದಿವ್ಯಮೌನ ವಹಿಸುವ ಮೂಲಕ ಕಾಂಗ್ರೆಸ್ ನಡೆಸಿದ ಹಗರಣದಲ್ಲಿ ಬಿಜೆಪಿಯು ಶಾಮೀಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಜನತೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆತಂಕ ವ್ಯಕ್ತಪಡಿಸಿದರು.