- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರತಿಯೊಂದು ಧಾರ್ಮಿಕ ಕ್ಷೇತ್ರದಿಂದಲೂ ಸಂಸ್ಕಾರ ನೀಡುವ ಕಾರ್ಯವಾಗಬೇಕು : ಡಾ. ಡಿ. ವೀರೇಂದ್ರ ಹೆಗ್ಗಡೆ

Manila [1]ಮಾಣಿಲ :  ಮುನಷ್ಯ ಸ್ವಾಇಚ್ಚೆಯಿಂದ ಬದಲಾದಲ್ಲಿ ಸಮಾಜ ಪರಿವರ್ತನೆಯಾಗಲು ಸಾಧ್ಯ. ಭಜನೆ, ಪ್ರಾರ್ಥನೆ, ಆಚರಣೆ ಮೂಲಕ ಸಂಸ್ಕಾರ ಸಿಗುತ್ತದೆ. ಪ್ರತಿಯೊಂದು ಧಾರ್ಮಿಕ ಕ್ಷೇತ್ರದಿಂದಲೂ ಸಂಸ್ಕಾರ ನೀಡುವ ಕಾರ್ಯವಾಗಬೇಕು  ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು  ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಮೂರನೇ ದಿನವಾದ ಮಂಗಳವಾರ  ಭಜನೋತ್ಸ ವದ ಅಂಗವಾಗಿ ಶ್ರೀಧಾಮದ ಶ್ರೀ ನಿತ್ಯಾನಂದ ವೇದಿಕೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜವನ್ನು ದುಶ್ಚಟಮುಕ್ತವಾಗಿಸಿ ಅದನ್ನು ತಿದ್ದುವ ಕಾರ್ಯ ಮಾಣಿಲ ಶ್ರೀಗಳಿಂದ ಆಗುತ್ತಿದೆ. ಇದು ತುಂಬಾ ಸಂತಸ ತಂದಿದೆ. ಈ ಕ್ಷೇತ್ರ ಇನ್ನಷ್ಟು ವೃದ್ಧಿಯಾಗಿ ಬೆಳಗಲಿ ಎಂದು ಡಾ| ಹೆಗಡೆಯವರು ಹಾರೈಸಿದರು.

ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಮಕ್ಕಳನ್ನು ಸರಿಯಾದ ಸಂಸ್ಕಾರ ನೀಡಿ  ಬೆಳೆಸಿದಾಗ ಅದಕ್ಕಿಂತ ಮಿಗಿಲಾದ ಸಂಪತ್ತು ಇನ್ನೊಂದಿಲ್ಲ. ಸಂತರು, ಸ್ವಾಮೀಜಿಗಳೇ ಸಮಾಜಕ್ಕೆ ಸಂದೇಶ ನೀಡಬೇಕಾದವರು. ಅದರ ಮೂಲಕ ಸಮಾಜವನ್ನು ದುಶ್ಚಟಮುಕ್ತವಾಗಿಸಿ ತಿದ್ದುವ ಕಾರ್ಯ ಮಾಡಬೇಕಾಗಿದೆ. ಭಗವಂತನ ಸೃಷ್ಠಿಯ ಸೂಕ್ಷ್ಮವನ್ನು ಅರಿಯುವ ಕೆಲಸವಾಗಬೇಕು ಎಂದು ಹೇಳಿದರು.

ಶ್ರೀ ಕ್ಷೇತ್ರ ಕಟೀಲಿನ ವೇ. ಮೂ. ಅನಂತಪದ್ಮನಾಭ ಅಸ್ರಣ್ಣರು ಮಾತನಾಡಿ ಮಾಣಿಲ ಶ್ರೀಗಳು ಏನೂ ಇಲ್ಲದ ಕಾಡಿನಲ್ಲಿ ಶ್ರೀ ಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ  ಕ್ಷೇತ್ರ ನಿರ್ಮಾಣ ಮಾಡಿರುವುದರ ಹಿಂದೆ ಅವರ ಪರಿಶ್ರಮ ತುಂಬಾ ಇದೇ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾಣಿಲ ಶ್ರೀಗಳ ಮಾತೃಶ್ರೀ ಕಮಲಮ್ಮರವರನ್ನು ಸನ್ಮಾನಿಸಿದರು.

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ, ಬಾಯಾರು ಪಂಚಲಿಂಗೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಪು ವಲಯ, ಮಾಣಿಲ ಕ್ಷೇತ್ರದ ವತಿಯಿಂದ ಗೌರವ ಸಲ್ಲಿಸಲಾಯಿತು.

ಉದ್ಯಮಿಗಳಾದ ಭಾಸ್ಕರ ಶೆಟ್ಟಿ ಪುಣೆ, ದಯಾನಂದ ಬಂಗೇರ ಮುಂಬಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೀತಾಪುರುಷೋತ್ತಮ ಹಾಗೂ ಮೀನಾಕ್ಷಿ ಪ್ರಾರ್ಥಿಸಿದರು. ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಸ್ವಾಗತಿಸಿದರು. ದಾಮೋದರ ಬಿ. ಎಂ. ಮಾರ್ನಬೈಲು ವಂದಿಸಿದರು. ಪುಷ್ಪರಾಜ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಮಂಜು ವಿಟ್ಲ ಸಹಕರಿಸಿದರು.