- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸೌಹಾರ್ದತೆ ಬೆಸೆದ ಜುಮ್ಮಾ ಕಮಿಟಿ: ದೇವಸ್ಥಾನ ಜೀರ್ಣೋದ್ಧಾರಕ್ಕೆ ಮಸೀದಿಯಿಂದ ದೇಣಿಗೆ

souhardathe [1]ಮಂಗಳೂರು: ಪುತ್ತೂರು ತಾಲೂಕಿನ ಪಡುಮಲೆಯ ಪೂಮಾಣಿ-ಕಿನ್ನಿಮಾಣಿ (ಉಳ್ಳಾಕುಲು) ವ್ಯಾಘ್ರಚಾಮುಂಡಿ (ರಾಜನ್ ದೈವ) ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಇದೇ ಫೆ. 23ರಿಂದ 25ರ ತನಕ ಇಲ್ಲಿ ಪುನರ್ ಬ್ರಹ್ಮಕಲಶೋತ್ಸವ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ ನಡೆಯುತ್ತಿದೆ.

ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಪಡುಮಲೆಯ ಜುಮ್ಮಾ ಮಸೀದಿ ಕಮಿಟಿಯವರು ಬುಧವಾರ 40,011 ರೂ. ನೆರವು ನೀಡುವ ಮೂಲಕ ಸೌಹಾರ್ದತೆ ಬೆಸೆದಿದ್ದಾರೆ.

ಪಡುಮಲೆ ಮಸೀದಿ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಬಡಗನ್ನೂರು, ಮಸೀದಿಯ ಧರ್ಮಗುರು ಸಂಶುದ್ದೀನ್ ದಾರಿಮಿ, ಮಸೀದಿಯ ಉಪಾಧ್ಯಕ್ಷ ಪಕ್ರುದ್ದೀನ್ ಹಾಜಿ, ಕೋಶಾಧಿಕಾರಿ ಆದಂ ಹಾಜಿ ಡೆಂಬಾಳೆ, ಕಾರ್ಯದರ್ಶಿ ಪಿ.ಬಿ. ಇಬ್ರಾಹಿಂ ಹಾಜಿ ಕೊಯಿಲ, ಕಮಿಟಿ ಸದಸ್ಯರಾದ ಆಲಿಕುಂಞಿ ಹಾಜಿ, ಪಿಲಿಪುಡಿ ಸೀದಿ ಹಾಜಿ ಕೊಯಿಲ ಮತ್ತಿತರರು ಬುಧವಾರ ದೈವಸ್ಥಾನಕ್ಕೆ ತೆರಳಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಅಣಿಲೆ ಅವರ ಮೂಲಕ ಜೀರ್ಣೋದ್ಧಾರ ಕಾರ್ಯಕ್ಕೆ ಆರ್ಥಿಕ ನೆರವು ನೀಡಿದ್ದಾರೆ.

ದೇವಾಲಯದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಮಸೀದಿ ಕಮಿಟಿಯವರ ದೇಣಿಗೆ ಸ್ವೀಕರಿಸಿ, ದೇಣಿಗೆ ನೀಡಿದವರಿಗೆ ದೈವಗಳು ಅನುಗ್ರಹಿಸಲಿ ಎಂದು ದೈವಗಳ ಮುಂದೆ ಪ್ರಾರ್ಥನೆ ಸಲ್ಲಿಸಿದರು.