- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು ವಿವಿ ‘ಕ್ಯಾಂಪಸ್ ಬರ್ಡ್‌ ಕೌಂಟ್‌‌’… ಪತ್ತೆಯಾಯ್ತು ಪ್ರಭೇದದ ಹಕ್ಕಿಗಳು!

campus-bird [1]ಮಂಗಳೂರು: ಕಳೆದ ಮೂರು ವರ್ಷಗಳಿಂದ ಮಂಗಳೂರು ವಿವಿ ಕ್ಯಾಂಪಸ್ ಬರ್ಡ್‌ ಕೌಂಟ್‌ನಲ್ಲಿ ಭಾಗವಹಿಸುತ್ತಿದೆ.

‘ಕ್ಯಾಂಪಸ್ ಬರ್ಡ್‌ ಕೌಂಟ್’ ಭಾರತದಾದ್ಯಂತ ನಡೆಯುವ ಹಕ್ಕಿ ಗಣನೆ. ಬರ್ಡ್‌ ಕೌಂಟ್ ಇಂಡಿಯಾ ಸಂಸ್ಥೆಯು ದೇಶದಲ್ಲಿನ ಸಂರಕ್ಷಿತ ಅರಣ್ಯಗಳ ಹೊರಗಿನ ಪಕ್ಷಿ ಸಂಕುಲದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸುತ್ತದೆ.

ಈ ಬಾರಿ ದೇಶದಾದ್ಯಂತ 230 ಕ್ಯಾಂಪಸ್‌ಗಳು ಈ ಕೌಂಟ್‌ನಲ್ಲಿ ಭಾಗವಹಿಸಿವೆ. ಕರ್ನಾಟಕದಲ್ಲಿ ಸುಮಾರು 23 ಕ್ಯಾಂಪಸ್‌‌ಗಳಲ್ಲಿ ಪಕ್ಷಿ ಗಣನೆ ನಡೆದಿದೆ.

ಮಂಗಳೂರು ವಿಶ್ವವಿದ್ಯಾನಿಲಯ ಪ್ರಥಮ ಬಾರಿ 2016 ರಲ್ಲಿ ಕೌಂಟ್ ನಡೆಸಿದ್ದು, 77 ಪ್ರಭೇದದ ಹಕ್ಕಿಗಳನ್ನು ದಾಖಲಿಸಿತ್ತು. 2017 ರ ಕೌಂಟ್‌ನಲ್ಲಿ 95 ಪ್ರಭೇದದ ಹಕ್ಕಿಗಳನ್ನು ದಾಖಲಿಸಲಾಗಿತ್ತು. ಈ ಬಾರಿಯ ಕ್ಯಾಂಪಸ್ ಬರ್ಡ್‌ ಕೌಂಟ್‌ ವಿನೀತ್ ಕುಮಾರ್ (ಸಂಶೋಧನಾ ವಿದ್ಯಾರ್ಥಿ) ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಜಗದೀಶ್ ಪೈಟನ್ಕರ್, ಭಾಗ್ಯ ಯು.ಜೆ., ಡೊನಾಲ್ಡ್ ಪ್ರೀತಮ್ ಜೊತೆಗೂಡಿ ಸಮರ್ಪಕವಾಗಿ ನಡೆದಿದ್ದು, ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಪಕ್ಷಿ ವೀಕ್ಷಕರು ಭಾಗವಹಿಸಿದ್ದರು.

ಸುಮಾರು 300 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ 2018 ರ ಕ್ಯಾಂಪಸ್ ಬರ್ಡ್‌ ಕೌಂಟ್ ಫೆ. 16-19 ರಂದು ನಡೆದಿದ್ದು, ಈ ಬಾರಿ 110 ಪ್ರಭೇದದ ಹಕ್ಕಿಗಳನ್ನು ದಾಖಲಿಸಲಾಗಿದೆ.

ಅಪರೂಪದ ಹಕ್ಕಿಗಳಾದ ಶ್ರೀಲಂಕಾದ ಕಪ್ಪೆಬಾಯಿ, ಬಿಳಿಮಚ್ಚೆ ನ್ತತಿಂಗ, ಚಂದ್ರ ಮುಕುಟ, ಕರಿತಲೆ ಹಕ್ಕಿ, ಸಣ್ಣ ಮಿನಿವೆಟ್, ನೀಲಿ ರಾಜಹಕ್ಕಿ, ಹಳದಿ ಟಿಟ್ಟಿಬ ಹಾಗೂ ನೀಲಕಂಠ ಕ್ಯಾಂಪಸ್‌ನಲ್ಲಿ ಕಂಡು ಬಂದಿವೆ.

ವಲಸೆ ಹಕ್ಕಿಗಳಾದ ನವರಂಗ ಕಂದು ಕೀಚುಗ, ಬೂಟುಗಾಲಿನ ಗಿಡುಗ, ಬೂದು ಕಾಜಾಣ, ಬೂದು ಉಲಿಯಕ್ಕಿ, ಹಸಿರು ಉಲಿಯಕ್ಕಿ, ಕಂದು ಎದೆಯ ನೊಣ ಹಿಡುಕ, ಕಪ್ಪು ಹಕ್ಕಿ, ಬೂದು ಸಿಪಿಲೆ ಹಾಗೂ ಕಡುಗಂದು ಪಿಪಿಳೀಕ ಹಕ್ಕಿಗಳು ಈ ಬಾರಿ ಕ್ಯಾಂಪಸ್‌ನಲ್ಲಿ ಕಾಣಸಿಕ್ಕಿವೆ.

ಪ್ರತಿ ವರ್ಷ ಈ ರೀತಿಯಲ್ಲಿ ಬರ್ಡ್‌ ಕೌಂಟ್ ನಡೆಸಿದ್ದಲ್ಲಿ ಇನ್ನು ಜಾಸ್ತಿ ಪಕ್ಷಿಗಳು ದಾಖಲಾಗುವುದರಲ್ಲಿ ಸಂದೇಹವಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಪಕ್ಷಿ ವೀಕ್ಷಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.