- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಉಡುಪಿಯಲ್ಲಿ ಮಾನಸಿಕ ಅಸ್ವಸ್ಥನ ರಂಪಾಟ, ಉಗ್ರ ಪ್ರತಾಪ

udupi [1]ಉಡುಪಿ: ನಗರದ ಮಲ್ಪೆ, ವಡಭಾಂಡೇಶ್ವರ, ಹೂಡಿ, ಆದಿಉಡುಪಿಯ ಸಾರ್ವಜನಿಕ ಸ್ಥಳಗಳಲ್ಲಿ ಅಪರಿಚಿತ ಮಾನಸಿಕ ರೋಗಿಯೊರ್ವ ಸಾರ್ವಜನಿಕರ ಮೇಲೆ ಹಲ್ಲೆ ಮಾಡುತ್ತಾ, ಸಾರ್ವಜನಿಕ ಸೊತ್ತುಗಳನ್ನು ನಾಶ ಮಾಡುತ್ತಾ, ಪರಿಸರದಲ್ಲಿ ಉಗ್ರಪ್ರತಾಪ ತೋರಿದ್ದಾನೆ. ಸುಮಾರು 30 ವರ್ಷದ ಈ ಯುವಕನನ್ನು ಈಗ ಕಾನೂನು ಪ್ರಕ್ರಿಯೆ ಮೂಲಕ ಧಾರವಾಡದ ಮಾನಸಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವ್ಯಕ್ತಿಯ ರಂಪಾಟಕ್ಕೆ ಮಲ್ಪೆ ಮತ್ತು ಆಸುಪಾಸಿನ ಪರಿಸರದಲ್ಲಿ ಬಹಳಷ್ಟು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ್ದರು.

ಸಾರ್ವಜನಿಕರ ತಲೆಗೆ ಗುರಿ ಇಟ್ಟು ಕಲ್ಲು ಹೊಡೆಯುವುದು, ಸೋಡಾ ಬಾಟಲಿಗಳನ್ನು ಎಸೆಯುತ್ತಿದ್ದ ಈತನ ಬಗ್ಗೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ, ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅವರು ಸ್ಥಳೀಯರ ಮತ್ತು ಪೊಲೀಸರ ಸಹಕಾರದೊಂದಿಗೆ ಧಾರವಾಡದ ಆಸ್ಪತೆಗೆ ಈತನನ್ನು ಕಳುಹಿಸಲು ಯಶಸ್ವಿಯಾಗಿದ್ದಾರೆ. ಇವನಿಂದಾಗಿ ಸ್ಥಳೀಯರು, ಮಹಿಳೆಯರು, ಶಾಲಾ ಮಕ್ಕಳು ರಸ್ತೆಯಲ್ಲಿ ತಿರುಗಾಡಲು ಹೆದರುತ್ತಿದ್ದರು.

ಈತನ ಉಪಟಳ ಎಲ್ಲೆ ಮೀರಿದಾಗ, ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಲಾಗಿತ್ತು. ಸಾರ್ವಜನಿಕರ ಪ್ರಾಣಕ್ಕೇ ಕುತ್ತು ಬರುವಷ್ಟು ಈತನ ರಾದ್ದಾಂತ ಹೆಚ್ಚಾಗಿತ್ತು. ಫೆ.22 ರಂದು ಸಂಜೆ 5ಗಂಟೆ ಸುಮಾರಿಗೆ, ವಡಭಾಂಡೇಶ್ವರ ಸಮೀಪ ಈತನನ್ನು ವಿಶುಶೆಟ್ಟಿ ಮತ್ತು ತಂಡ ವಶಕ್ಕೆ ಪಡೆದುಕೊಂಡು ಮಲ್ಪೆ ಪೊಲೀಸ್ ಠಾಣೆಯಲ್ಲಿ ಹಾಜರು ಪಡಿಸಿದ್ದಾರೆ.

ಅದೇ ದಿನ ರಾತ್ರಿ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಗೆ ಈ ಮನೋರೋಗಿಯನ್ನು ದಾಖಲು ಪಡಿಸಲಾಯಿತು. ಜಿಲ್ಲಾಸ್ಪತ್ರೆಯಲ್ಲಿ ಭದ್ರತೆ ಮತ್ತು ಮಾನಸಿಕ ವಾರ್ಡಿನ ಸೌಲಭ್ಯ ಇಲ್ಲದೇ ಇದ್ದುದ್ದರಿಂದ, ಫೆ.23 ರಂದು ಪೊಲೀಸರ ಸಹಾಯದೊಂದಿಗೆ ಧಾರವಾಡ ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ಅಲ್ಲಿನ ಮಾನಸಿಕ ಆಸ್ಪತ್ರೆಗೆ ದಾಖಲು ಪಡಿಸಲಾಗಿದೆ.