- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ

pratap-simha [1]ಮೈಸೂರು: ಸಂಸದ ಪ್ರತಾಪ ಸಿಂಹ ವಿರುದ್ಧ ಬಹುಭಾಷಾ ಕಲಾವಿದ, ನಟ ಪ್ರಕಾಶ್ ರೈ ಇಂದು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆಯೇ ನಗರಕ್ಕೆ ಆಗಮಿಸಿದ್ದ ನಟ ರೈ, ಆಪ್ತರು, ವಕೀಲರು ಹಾಗೂ ಪ್ರಗತಿಪರ ಚಿಂತಕರ ಜತೆ ಸಮಾಲೋಚನೆ ನಡೆಸಿದ್ದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ಪ್ರತಾಪ ಸಿಂಹ, ಟ್ವೀಟರ್, ಫೇಸ್ ಬುಕ್ ನಂಥ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕಟಿಸಿದ್ದಲ್ಲದೆ ಟ್ರೋಲ್ ಗೂಂಡಾಗಿರಿ ನಡೆಸಿದ್ದಾರೆ ಎಂಬುದು ಪ್ರಕಾಶ್ ರೈ ಆರೋಪ.

ಕೆಲ ದಿನಗಳ ಹಿಂದೆ ನಟ ಪ್ರಕಾಶ್ ರೈ , ಪ್ರಧಾನಿ ನರೇಂದ್ರ ಮೋದಿ ಅವರನ್ನು ಘಟನೆಯೊಂದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮೂಲಕ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಸಂಸದ ಪ್ರತಾಪ್ ಸಿಂಹ ಟ್ವೀಟರ್ ಮೂಲಕ ನಟ ರೈಗೆ ತಿರುಗೇಟು ನೀಡಿದ್ದರು. ತನ್ನ ಮಗ ತೀರಿಹೋದಾಗ ನೃತ್ಯಗಾರ್ತಿಯೊಬ್ಬರ ಮಗ್ಗುಲಲ್ಲಿದ್ದ ಈ ವ್ಯಕ್ತಿಗೆ ಮೋದಿಯವರನ್ನು ಪ್ರಶ್ನಿಸುವ ನೈತಿಕತೆ ಏನಿದೆ? ರೀಲ್ ನಲ್ಲಷ್ಟೆ ಅಲ್ಲ, ನಿಜಜೀವನದಲ್ಲೂ ರೈ ಖಳನಾಯಕ ಎಂದು ಟ್ವಿಟರ್ ನಲ್ಲಿ ಟೀಕಿಸಿದ್ದರು. ಇದು ಬಳಿಕ ವಿವಾದಕ್ಕೆ ಗುರಿಯಾಗಿತ್ತು.

ಮೈಸೂರು- ಕೊಡಗು ಕ್ಷೇತ್ರದ ಸಂಸದ ಪ್ರತಾಪ ಸಿಂಹರ ಈ ಟ್ವೀಟರ್ ಹೇಳಿಕೆ ವಿರುದ್ಧ ಬಹುಭಾಷ ನಟ, ನಿರ್ಮಾಪಕ ಪ್ರಕಾಶ ರೈ ಇಂದು ಮೈಸೂರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತಿರುವುದು ಕೇವಲ 1 ರೂ. ಗೆ ಎಂಬುದು ವಿಶೇಷ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟ ಪ್ರಕಾಶ್ ರೈ, ಟ್ವಿಟ್ಟರ್ ಹೇಳಿಕೆಗೆ ಪ್ರತಾಪ್ ಸಿಂಹ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಲೀಗಲ್ ನೋಟಿಸ್ ಜಾರಿ ಮಾಡಿದ್ದರು. ಆದರೆ ಅದಕ್ಕೆ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಕಾನೂನು ಸಮರಕ್ಕೆ ಈಗ ಮುಂದಾಗಿದ್ದಾರೆ.

ವೈಯಕ್ತಿಕ ಕಾರಣ ಅಥವಾ ಹಣಕ್ಕಾಗಿ ಮಾನನಷ್ಟ ಮೊಕದ್ದಮೆ ಹೂಡುತ್ತಿಲ್ಲ. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ ಗಳನ್ನು ಕೆಲವರು ಸ್ವಹಿತಾಸಕ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ ಅಶ್ಲೀಲ, ಅಸಭ್ಯ ಭಾಷೆ ಪ್ರಯೋಗಿಸುತ್ತಿದ್ದಾರೆ. ಜವಾಬ್ದಾರಿಯುತ ಸಂಸದ ಸ್ಥಾನದಲ್ಲಿರುವ ವ್ಯಕ್ತಿ ಸಹ ಇದೇ ಮಾರ್ಗ ಅನುಸರಿಸಿದರೆ ಹೇಗೆ..? ಇದನ್ನೆಲ್ಲ ನೋಡಿಯೂ ಸಭ್ಯ ಜನರು ಮೌನವಾಗಿ ಕೂರುವಂತಾಗಿದೆ. ಇಂಥವರಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಲು ಮುಂದಾಗಿದ್ದೇನೆ. ಆದ್ದರಿಂದಲೇ ಸಂಸದ ಪ್ರತಾಪ ಸಿಂಹ ವಿರುದ್ಧ 1 ರೂ.ಗೆ ಮಾನನಷ್ಟ ಕೇಸು ಹಾಕುತ್ತಿದ್ದೇನೆ ಎಂಬುದು ರೈ ಸಮರ್ಥನೆ.