- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ… 3700 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನರ್ಹ

2nd-puc [1]ಬೆಂಗಳೂರು: ರಾಜ್ಯದಾದ್ಯಂತ ದ್ವಿತೀಯ ಪಿಯು ಪರೀಕ್ಷೆಗಳು ನಾಳೆಯಿಂದ ಆರಂಭವಾಗಲಿದ್ದು, ಮಾರ್ಚ್17 ರವರೆಗೆ ನಡೆಯಲಿದೆ. ಈ ಮಧ್ಯೆ ಒಟ್ಟು ವಿದ್ಯಾರ್ಥಿಗಳ ಪೈಕಿ ಅಂದಾಜು 3700 ವಿದ್ಯಾರ್ಥಿಗಳು ಈ ಭಾರಿ ಪರೀಕ್ಷೆಯಿಂದ ವಂಚಿತರಾಗಲಿದ್ದಾರೆ.

ಹೌದು ಹಾಜರಾತಿ ಕೊರತೆಯಿಂದ ಈ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳುವ ಹಕ್ಕು ಕಳೆದುಕೊಳ್ಳಲಿದ್ದಾರೆ.

ಈಗಾಗಲೇ ಮೊದಲ ಹಂತದಲ್ಲಿ 1,700 ವಿದ್ಯಾರ್ಥಿಗಳಿಗೆ ಕನಿಷ್ಠ ಹಾಜರಾತಿ ಕೊರತೆ ಇರೋದರಿಂದ ನಿಮಗೆ ಪರೀಕ್ಷೆಗೆ ಕುಳಿತುಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿಗಳು ಮಾಹಿತಿ ನೀಡಿದೆ. ಹೀಗಾಗಿ ಇಂಥವರ ಪ್ರವೇಶ ಪತ್ರ ಕೂಡ ಕಳುಹಿಸಿಲ್ಲ. ಇದಲ್ಲದೇ ಈಗ ಪದವಿಪೂರ್ವ ಶಿಕ್ಷಣ ಇಲಾಖೆ ಕೂಡ ಕನಿಷ್ಠ ಹಾಜರಾತಿ ಇಲ್ಲದವರ ಪಟ್ಟಿ ರೂಪಿಸುತ್ತಿದ್ದು ಇದರಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳಿದ್ದು, ಅವರೆಲ್ಲರೂ ಪರೀಕ್ಷೆಯಿಂದ ವಂಚಿತರಾಗುವ ಸಾಧ್ಯತೆ ದಟ್ಟವಾಗಿದೆ.

ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ ಪ್ರತಿ ವಿಷಯದಲ್ಲೂ ಕನಿಷ್ಠ ಶೇ.75 ಹಾಜರಾತಿ ಕಡ್ಡಾಯವಾಗಿದೆ. ಹೀಗಾಗಿ ಸತತ ಗೈರಾಗಿದ್ದು, ಹಾಜರಾತಿ ಸಮರ್ಪಕವಾಗಿಲ್ಲದವರು ಪರೀಕ್ಷೆಗೆ ಹಾಜರಾಗುವ ಅವಕಾಶ ಕಳೆದುಕೊಳ್ಳುತ್ತಾರೆ. ಕಳೆದ ವರ್ಷ 4,204 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅರ್ಹತೆ ಕಳೆದುಕೊಂಡಿದ್ದರು. ಇನ್ನು ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಳ್ಳುವ ವಿದ್ಯಾರ್ಥಿಗಳು ಮರುಪರೀಕ್ಷೆಗೂ ಹಾಜರಾಗುವಂತಿಲ್ಲ. ಮುಂದಿನ ಸಲ 2019 ರಲ್ಲಿ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯಬಹುದಾಗಿದೆ.

ಇನ್ನು ಪರೀಕ್ಷೆ ಬರೆಯುವ ಅವಕಾಶ ತಪ್ಪಿಸಿಕೊಂಡ ವಿದ್ಯಾರ್ಥಿಗಳಿಗೆ ಈಗಾಗಲೇ ಸಾಕಷ್ಟು ಸಲ ಅವರ ಹಾಜರಾತಿ ಕೊರತೆ ಇರುವ ಬಗ್ಗೆ ನೊಟೀಸ್ ನೀಡಿ ತಿಳಿಸಲಾಗಿತ್ತು. ಅಲ್ಲದೇ ಪೋಷಕರಿಗೆ ಪತ್ರ ಹಾಗೂ ಮೊಬೈಲ್‌ ಮೆಸೇಜ್ ಮೂಲಕವು ತಿಳಿಸಲಾಗಿತ್ತು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ಹೇಳಿದ್ದಾರೆ. ಒಟ್ಟಿನಲ್ಲಿ ತಾವೇ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗುವಂತಾಗಿದೆ.