- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪರೀಕ್ಷಾ ಜ್ವರದ ನಡುವೆ ಬೆಂಗಳೂರಲ್ಲಿ ಬಣ್ಣದ ಹಬ್ಬದ ಸಂಭ್ರಮ

holi-day [1]ಬೆಂಗಳೂರು: ಮಹಾನಗರದಲ್ಲಿ ಬಣ್ಣದ ಹಬ್ಬ ಕಳೆಗಟ್ಟಿದೆ. ಎಲ್ಲಿ ನೋಡಿದರೂ ಮಕ್ಕಳು, ವಯಸ್ಕರು ಬೀದಿಗಿಳಿದು ಬಣ್ಣದ ಹೋಳಿ ಆಟದಲ್ಲಿ ತೊಡಗಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಬಣ್ಣದ ಹಬ್ಬ ಹೋಳಿ ಆಚರಣೆ ನಡೆಯಲಿದ್ದು, ಗುರುವಾರ ಬೆಳಗ್ಗಿನಿಂದಲೇ ಬಣ್ಣ ಎರಚಾಡುವ ಪ್ರಕ್ರಿಯೆ ಆರಂಭವಾಗಿದೆ. ಕಳೆದ ವರ್ಷಗಳಂತೆ ಈ ವರ್ಷವೂ ಹಲವು ಸಂಘ, ಸಂಸ್ಥೆಗಳು ವಿಶೇಷವಾಗಿ ಬಣ್ಣದ ಹಬ್ಬ ಆಯೋಜಿಸಿದ್ದು ಯುವಕ, ಯುವತಿಯರು ಪಾಲ್ಗೊಂಡಿದ್ದಾರೆ. ಖಾಸಗಿ ಪಂಚತಾರಾ ಹೋಟೆಲ್‌ಗಳಲ್ಲಿ ಕೂಡ ಬಣ್ಣದ ಹಬ್ಬ ಆಚರಣೆಗೆ ಅವಕಾಶ ನೀಡಲಾಗಿದೆ.

ಉತ್ತರ ಭಾರತೀಯರು ವಾಸವಾಗಿರುವ ಬೆಂಗಳೂರಿನ ವಿವಿಧೆಡೆ ಹಬ್ಬದ ಆಚರಣೆ ಜೋರಾಗಿದೆ. ಕೆಲವೆಡೆ ಜನ ಬೀದಿಗಿಳಿದು ಆಚರಣೆಯಲ್ಲಿ ತೊಡಗಿದ್ದರೆ, ಮತ್ತೆ ಕೆಲವೆಡೆ ಸಾಂಪ್ರದಾಯಿಕವಾಗಿ ಬಣ್ಣದ ಹಬ್ಬ ಆಚರಿಸುತ್ತಿದ್ದಾರೆ.

ಕಾಲೇಜು, ಕಂಪನಿ ಮಂಕು ಕಳೆದ ವರ್ಷ ವಾರಾಂತ್ಯ ಬಂದಿದ್ದ ಹೋಳಿ ಹಬ್ಬವನ್ನು ಕಾಲೇಜುಗಳು, ಸಾಫ್ಟ್‌‌ವೇರ್ ಮತ್ತಿತರ ಕಂಪನಿಗಳು ಅದ್ಧೂರಿಯಾಗಿ ಆಚರಿಸಿದ್ದವು. ಆದರೆ ಈ ಬಾರಿ ಇಲ್ಲಿ ಕಳೆ ಇಲ್ಲವಾಗಿದೆ. ವಿವಿಧ ಕಂಪನಿಗಳು ವಾರದ ಮಧ್ಯೆ ಬಂದಿರುವ ಹೋಳಿ ಹಬ್ಬ ಆಚರಣೆಗೆ ರಜೆ ನೀಡಿಲ್ಲ. ಈ ಕಾರಣ ಉದ್ಯೋಗಿಗಳು ಆಚೆ ಬಂದು ಹೋಳಿ ಆಚರಿಸುತ್ತಿಲ್ಲ. ಸಂಜೆಯ ಹೊತ್ತಿಗೆ ಬಣ್ಣದ ಹಬ್ಬ ಕಳೆಪಡೆಯುವ ಸಾಧ್ಯತೆ ಇದೆ.

ಇನ್ನು ದ್ವಿತೀಯ ಪಿಯುಸಿ ಪರೀಕ್ಷೆ ಇಂದು ಆರಂಭವಾಗಿದೆ. ಬಹುತೇಕ ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಇದರಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷೆಯತ್ತ ಗಮನ ಹರಿಸಿದ್ದರೆ, ಉಳಿದ ವಿದ್ಯಾರ್ಥಿಗಳು ಶಾಲಾ ಆವರಣದಿಂದ ಅರ್ಧ ಕಿ.ಮಿ. ದೂರದಲ್ಲಿ ಸಂಭ್ರಮ ಹಮ್ಮಿಕೊಂಡಿದ್ದಾರೆ. ಇದರಿಂದ ಪ್ರತಿ ವರ್ಷ ಕಾಲೇಜುಗಳ ಎದುರು ಕಂಡು ಬರುತ್ತಿದ್ದ ಹೋಳಿ ಸಂಭ್ರಮ ಈ ಸಾರಿ ಮಂಕಾಗಿದೆ.

ನಗರದ ವಿವಿಧೆಡೆ ವಾರದ ದಿನವಾದರೂ ಕೆಲವರು ಬಿರು ಬೇಸಿಗೆ ವಾತಾವರಣದಲ್ಲೇ ರಸ್ತೆಗಿಳಿದು ಸಂಭ್ರಮಿಸಿದ್ದಾರೆ. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಪ್ರಮಾಣ ಬಹಳ ಕಡಿಮೆ ಇದೆ. ಅಲ್ಲದೇ ಪೊಲೀಸರು ಕೂಡ ವಿಶೇಷ ಗಸ್ತು ತಿರುಗುತ್ತಿದ್ದು, ಅನಗತ್ಯ ಕಲಹ, ರಸ್ತೆ ಮಧ್ಯ ಸಂಭ್ರಮಾಚರಣೆ, ಗುಂಪು ಸೇರಿ ಜನಸಾಮಾನ್ಯರಿಗೆ ಬಣ್ಣ ಎರಚಲು ಮುಂದಾಗುವುದನ್ನು ತಡೆಯುತ್ತಿದ್ದಾರೆ. ಹೀಗಾಗಿ ಹಲವು ಕಡೆ ಕಡೆ ಸಂಭ್ರಮಕ್ಕೆ ತಡೆ ಉಂಟಾಗಿದೆ. ನಾಳೆ ಬಣ್ಣದ ಹಬ್ಬಕ್ಕೆ ಸರ್ಕಾರಿ ರಜೆ ಇದ್ದು ಇನ್ನಷ್ಟು ರಂಗು ಪಡೆಯುವ ಸಾಧ್ಯತೆ ಇದೆ.