- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಂಗ್ರೆಸ್‌-ಬಿಜೆಪಿ ವಿರುದ್ಧ ಮುತಾಲಿಕ್‌ ವಾಗ್ದಾಳಿ

muthalik [1]ಮಂಗಳೂರು: ಬಿಜೆಪಿ, ಕಾಂಗ್ರೆಸ್ ಪಕ್ಷಗಳ ವಿರುದ್ಧ ಕಿಡಿಕಾರಿರುವ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಈ ಎರಡೂ ಪಕ್ಷಗಳು ತುಷ್ಟೀಕರಣದ ಪಕ್ಷಗಳು ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಮುಸ್ಲಿಂ, ಬಿಜೆಪಿ ಹಿಂದೂ ತುಷ್ಟೀಕರಣದ ಪಕ್ಷ. ಈ ಎರಡೂ ಪಕ್ಷಗಳ ಉದ್ದೇಶ ಒಂದೇ. ಅದು ಅಧಿಕಾರವೇ ವಿನಃ ಜನ ಸಾಮಾನ್ಯರ ಅಭಿವೃದ್ಧಿಯಲ್ಲ. ಲೂಟಿ ಮಾಡಬೇಕೆಂಬುದೇ ಇವರ ಗುರಿ ಎಂದು ಟೀಕಿಸಿದರು.

ಬಿಜೆಪಿ ಮಾ. 3ರಿಂದ ಹಮ್ಮಿಕೊಂಡಿರುವ ಜನಸುರಕ್ಷಾ ಯಾತ್ರೆಯನ್ನು ಟೀಕಿಸಿರುವ ಅವರು, ಇದೊಂದು ಡೋಂಗಿ ಯಾತ್ರೆ. ಸಾಧ್ಯವಿದ್ದರೆ ಭಟ್ಕಳದಿಂದ ಯಾತ್ರೆ ಆರಂಭಿಸಲಿ. ಬಿಜೆಪಿ ಶಾಸಕ ಚಿತ್ತರಂಜನ್, ತಾಲೂಕು ಅಧ್ಯಕ್ಷ ತಿಮ್ಮಪ್ಪ ನಾಯ್ಕ ಕೊಲೆಯಾಗಿ ವರ್ಷಗಳು ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ. ಭಟ್ಕಳದ ಜನರಿಗೆ ಬಿಜೆಪಿ ಉತ್ತರ ಕೊಡಬೇಕು. ಬಿಜೆಪಿಯದ್ದು ಮೋಸ, ಅಧಿಕಾರ ದಾಹದ ಯಾತ್ರೆ ಎಂದರು.

ಕರ್ನಾಟಕದಲ್ಲಿ ಶಿವಸೇನೆ ಆರಂಭಿಸಿದ್ದೇವೆ. ಕರ್ನಾಟಕದ ರಾಜ್ಯಾಧ್ಯಕ್ಷರಾಗಿ ಕಲಬುರಗಿಯ ಸಿದ್ದಲಿಂಗ ಸ್ವಾಮೀಜಿಯವರನ್ನು ಆಯ್ಕೆ ಮಾಡಿದ್ದೇವೆ. ಈ ಸಲದ ಚುನಾವಣೆಯಲ್ಲಿ ಶಿವಸೇನೆ 52 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಜನಸ್ಪಂದನ, ಅಭಿವೃದ್ಧಿ, ಹಿಂದುತ್ವದ ಬಗ್ಗೆ ಜನರಿಗೆ ಬೇಸರ ಹುಟ್ಟಿದೆ. ಕರ್ನಾಟಕದಲ್ಲಿ ಶಿವಸೇನೆ ನಿಶ್ಚಿತವಾಗಿ ಇತಿಹಾಸ ಬರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ನಾವು ಸ್ಪರ್ಧಿಸುವ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಬಹುದು. ರಾಜ್ಯದಲ್ಲಿ ಶಿವಸೇನೆಗೆ ಬೇಡಿಕೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಸಭೆ ನಡೆಸಿ ನಮ್ಮ ಅಭ್ಯರ್ಥಿಗಳನ್ನು ಇಲ್ಲಿ ಕಣಕ್ಕಿಳಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಯಾವುದೇ ಪಕ್ಷದೊಂದಿಗೂ ಶಿವಸೇನೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಮಗೆ ಹಿಂದೂ ಮಹಾಸಭಾದ ಬೆಂಬಲವಿದೆ. ಶೃಂಗೇರಿ ಅಥವಾ ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ತಾನು ಸ್ಪರ್ಧಿಸಲಿದ್ದೇನೆ. ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಜನರು ಬೇಸರಗೊಂಡಿದ್ದಾರೆ. ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷ 2 ರಾಷ್ಟ್ರೀಯ ಪಕ್ಷಗಳನ್ನು ಧೂಳಿಪಟ ಮಾಡಿದ ಹಾಗೆ ಕರ್ನಾಟಕದಲ್ಲೂ 3 ಪಕ್ಷಗಳ ದುರಾಡಳಿತ ನೋಡಿದ ಜನರು, ಹೊಸ ವಿಚಾರಧಾರೆಯ ಶಿವಸೇನೆಗೆ ಬೆಂಬಲ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲೆಯ ನವೀನ್ ಹಿಂದೂ ಕಾರ್ಯಕರ್ತ. ಅವನ ಮೇಲೆ ಸುಳ್ಳು ಆರೋಪ ಹೊರಿಸಿ ಗೌರಿ ಹಂತಕ ಎಂದಿದ್ದಾರೆ. ಇದೆಲ್ಲಾ ಶುದ್ಧ ಸುಳ್ಳು. ಅವನು ಆ ರೀತಿ ಮಾಡಲು ಸಾಧ್ಯವಿಲ್ಲ. ಕಲಬುರ್ಗಿ ಹಾಗೂ ಗೌರಿ ಹಂತಕರನ್ನು ಬಂಧಿಸುವಲ್ಲಿ ವಿಫಲ ಎನ್ನುವ ಆರೋಪ ತಪ್ಪಿಸಲು ರಾಜ್ಯ ಸರ್ಕಾರ ಯಾರನ್ನೋ ಹಿಡಿದು ಗೌರಿ ಹಂತಕ ಎನ್ನುತ್ತಿದೆ ಎಂದು ಆರೋಪಿಸಿದರು.