- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪೆಟ್ರೋಲ್ ದರ ಎತ್ತ ಸಾಗುತ್ತಿದೆ?

Petrol prize [1]

ಕಳೆದ 2009ರ ಜುಲೈ ತಿಂಗಳಲ್ಲಿ ಪೆಟ್ರೋಲ್ ದರ ನಿಯಂತ್ರಣವನ್ನು ಸರಕಾರವು ತೈಲ ಕಂಪನಿಗಳ ಸುಪರ್ದಿಗೆ ಒಪ್ಪಿಸಿದ ಬಳಿಕ ಎರಡು ವರ್ಷಗಳಲ್ಲಿ 12ನೇ ಬಾರಿ ಪೆಟ್ರೋಲ್ ದರ ಏರಿಸಲಾಗಿದೆ. ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಳಿಕೆಯಾಗುತ್ತಿದೆ, ಅದಕ್ಕೆ ಅನುಸಾರವಾಗಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಬೆಲೆ ಪರಿಷ್ಕರಿಸಲಾಗುತ್ತದೆ ಎಂದು ಅಂದು ಘೋಷಿಸಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಹಲವಾರು ಬಾರಿ ಏರಿವೆ, ಇಳಿಕೆಯೂ ಆಗಿವೆ. ಆದರೆ ಭಾರತದಲ್ಲಿ ಮಾತ್ರ ಏರುತ್ತಲೇ ಇದೆ! ಜನರನ್ನು ಹೇಗೆ ಮೋಸಪಡಿಸುವುದು ಅಂತ ಇವರನ್ನು ನೋಡಿ ಕಲಿಯಬೇಕು!

ಪೆಟ್ರೋಲಿಯಂ ವಿತರಣಾ ಕಂಪನಿಗಳಿಗೆ ನಷ್ಟವಾಗುತ್ತಿದೆ ಎಂಬುದು ಕುಂಟು ನೆಪ ಅಂತ ನಮ್ಮ ನಮ್ಮಂಥಾ ಜನ ಸಾಮಾನ್ಯರು ಅಂದುಕೊಳ್ಳಬಹುದು. ಯಾಕೆಂದರೆ, ದಿನಕ್ಕೆ ಹತ್ತು ಹದಿನೈದು ಕೋಟಿ ನಷ್ಟವಾಗುತ್ತದೆ ಎಂದು ಈ ಪೆಟ್ರೋಲಿಯಂ ಕಂಪನಿಗಳು ಹೇಳಿಕೊಳ್ಳುತ್ತಿದ್ದರೆ, ಇದುವರೆಗೆ ಅವುಗಳು ಬಾಳಿ ಬದುಕಿದ್ದು ಹೇಗೆ? ಕೋಟಿ ಕೋಟಿ ನಷ್ಟವಾಗಿಯೂ ವ್ಯವಹಾರ ನಡೆಸುತ್ತಿರುವುದು ಹೇಗೆ ಸಾಧ್ಯ? ನಿಜಕ್ಕೂ ಎಲ್ಲಿ ನಷ್ಟವಾಗುತ್ತಿದೆ? ಈ ತೈಲ ಕಂಪನಿಗಳೆಂಬ ಬಿಳಿಯಾನೆಗಳನ್ನು ಸಾಕುವುದಕ್ಕೇ ಹಣ ಸಾಲುತ್ತಿಲ್ಲವೇ? ಎಂಬುದು ಮೇಲ್ನೋಟಕ್ಕೆ ವ್ಯಕ್ತವಾಗುವ ಪ್ರಶ್ನೆಗಳಾದರೆ, ತೈಲ ಕಂಪನಿಗಳು ನಿಜಕ್ಕೂ ತೈಲ ಬೆಲೆಯನ್ನು ಯಾವ ರೀತಿ ಲೆಕ್ಕಾಚಾರ ಮಾಡುತ್ತಿವೆ ಎಂಬುದರ ಸ್ಪಷ್ಟ ವಿಚಾರ ಜನರ ಮುಂದಿಲ್ಲ. ಅದ್ಯಾವ ಸೂತ್ರ ಆಧರಿಸಿ ಅವರು ಬೆಲೆ ನಿಗದಿಪಡಿಸುತ್ತಾರೆ? ಪೆಟ್ರೋಲ್ ಬಂಕುಗಳ ಅತ್ಯಾಧುನಿಕ, ಐಷಾರಾಮದ ಕಟ್ಟಡಗಳನ್ನು ನೋಡಿದರೆ, ಮತ್ತು ಪೆಟ್ರೋಲ್ ಬಂಕ್‌ಗಾಗಿ ಗುತ್ತಿಗೆ ಪಡೆಯಲು ಹಣವುಳ್ಳವರ ಪೈಪೋಟಿ ನೋಡಿದರೆ ಗೊತ್ತಾಗುತ್ತದೆ ಅದು ಎಷ್ಟು ನಷ್ಟ ಅನುಭವಿಸುತ್ತವೆ ಎಂಬುದು! ಅಂದರೆ, ಎಲ್ಲಿಯೂ ಪಾರದರ್ಶಕತೆಯಿಲ್ಲ. ಹೀಗಾಗಿಯೇ ಜನರಲ್ಲಿ ಶಂಕೆ ಮೂಡಲು ಕಾರಣವಾಗಿದೆ.

ತಮ್ಮ ಆಡಳಿತದ, ವಿತ್ತ ವ್ಯವಸ್ಥೆಯ ಸಮತೋಲನಗೊಳಿಸುವ ಅಸಾಮರ್ಥ್ಯವನ್ನು ಬಚ್ಚಿಟ್ಟು, ತಾನು ಬಚಾವ್ ಆಗಲು ಜನಸಾಮಾನ್ಯನಿಗೆ ಹೊಡೆಯುವುದೇ ಅತ್ಯಂತ ಸುಲಭ ಮಾರ್ಗ ಎಂದುಕೊಂಡಂತಿದೆ ನಮ್ಮನ್ನಾಳುವ ಸರಕಾರ. ಪ್ರತಿಪಕ್ಷಗಳೂ ಒಂದಷ್ಟು ದಿನ ಕೂಗಾಡುತ್ತವೆ. ಅಷ್ಟು ಹೊತ್ತಿಗೆ ಬೇರೊಂದು “ಬರ್ನಿಂಗ್ ಇಶ್ಯೂ”ವನ್ನು ಸರಕಾರವು ತನ್ನ ಬತ್ತಳಿಕೆಯಿಂದ ಹೊರ ಹಾಕಿರುತ್ತದೆ. ಪ್ರತಿಪಕ್ಷಗಳ ಗಮನ ಅತ್ತ ಹೋಗುತ್ತದೆ. ಅಲ್ಲಿಗೆ ಜನ ಸಾಮಾನ್ಯನ ಸ್ಥಿತಿ ದೇವರಿಗೇ ಪ್ರೀತಿ!

ಆಡಳಿತ ಪಕ್ಷದಷ್ಟೇ ಪ್ರತಿಪಕ್ಷಗಳಿಗೂ ಜವಾಬ್ದಾರಿಯಿದೆ ಮತ್ತು ಶಕ್ತಿಯಿರಬೇಕಾಗಿತ್ತು. ಆದರೆ, ಬೆಲೆ ಏರಿಕೆಯಿಂದ ಜನ ಸಾಮಾನ್ಯರನ್ನು ರಕ್ಷಿಸಲು ಮಾತ್ರ ಯಾರೂ ಮುಂದಾಗುತ್ತಿಲ್ಲ. ಈ ಬಾರಿಯಾದರೂ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಮುಂದೆ ಹೋಗಿ, ಜನ ಸಾಮಾನ್ಯರನ್ನು ಕಾಪಾಡುವರೇ?  – kwd