- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬೆಂಗಳೂರನ್ನ ಮೊದಲು ಹಾಳು ಮಾಡಿದ್ದೇ ಬಿಜೆಪಿ: ಹೆಚ್‌ಡಿಕೆ ವಾಗ್ದಾಳಿ

kumarswamy [1]ಮೈಸೂರು: ಮೊದಲು ಬೆಂಗಳೂರನ್ನ ಹಾಳು‌ ಮಾಡಿದ್ದೇ ಬಿಜೆಪಿಯವರು ಎಂದು ಬೆಂಗಳೂರು ರಕ್ಷಿಸಿ ಪಾದಯಾತ್ರೆ ಬಗ್ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಬಿಜೆಪಿಯವರು ಈಗ ಪಾದಯಾತ್ರೆಯನ್ನ ಏಕೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಆದರೆ 5 ವರ್ಷದ ಆಡಳಿತದಲ್ಲಿ ಬೆಂಗಳೂರು ಅಭಿವೃದ್ಧಿಗೆ ಸಿದ್ದರಾಮಯ್ಯ ಏನನ್ನು ಕೊಟ್ಟಿಲ್ಲ‌. ಬೆಂಗಳೂರು ಮತ್ತು‌ ಮೈಸೂರನಲ್ಲಿ ಏನಾದರು‌ ಅಭಿವೃದ್ಧಿಯಾಗಿದೆ ಅಂದರೆ ಅದು‌ ನಮ್ಮ ಕಾಲದಲ್ಲಿ ಎಂದರು.

ಅಭಿವೃದ್ಧಿ ಹೆಸರಿನಲ್ಲಿ‌ ನಿಮ್ಮ ಪಾಕೇಟ್ ತುಂಬಿಸಿಕೊಳ್ಳುತ್ತಿದ್ದೀರಿ ಎಂದು ಸಿಎಂ ವಿರುದ್ದ ಟೀಕಿಸಿದ ಹೆಚ್.ಡಿ ಕೆ. ಮೈಸೂರು ಅಭಿವೃದ್ಧಿಗೆ ಸಿಎಂ ಕೊಡುಗೆ ಏನೂ ಇಲ್ಲ. ಬೆಂಗಳೂರಿನ ಮಡಿವಾಳ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಅಡಿಪಾಯ ಹಾಕಿದ್ದು ನಾನು. ಸಿಎಂ ಅರ್ಧ ಕೆಲಸ ಮಾಡಿ ಈಗ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಪರ್ಸೆಂಟೇಜ್ ಬಗ್ಗೆ ಮಾತಾಡುತ್ತಿವೆ. ಇಬ್ಬರು ಪರ್ಸೆಂಟೇಜ್‌ನಲ್ಲಿ ನಿಸ್ಸೀಮರು. ನನ್ನ ಆಡಳಿತದಲ್ಲಿ ಎಷ್ಟು ಪರ್ಸೆಂಟೇಜ್ ಇತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಪರ್ಸೆಂಟೇಜ್ ಇದೆ ಎಂದು ಎಲ್ಲಾ ಗುತ್ತಿಗೆದಾರರಿಗೆ ಗೊತ್ತಿದೆ. ಇಂತಹ ಸರ್ಕಾರ ಬೇಕಾ.? ಪರ್ಸೆಂಟೇಜ್ ರಹಿತ ಸರ್ಕಾರ ಬೇಕಾ.? ಈ ಬಗ್ಗೆ ಜನ ತೀರ್ಮಾನ ಮಾಡಲಿ ಎಂದು ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ ಹಿನ್ನಲೆಯಲ್ಲಿ ಮೈಸೂರು ಸೇರಿದಂತೆ ಹಲವೆಡೆ ಜೆಡಿಎಸ್ ಮುಖಂಡರ ಬಂಡಾಯದ ವಿಚಾರದ ಪ್ರಶ್ನೆಗಳಿಗೆ ಗರಂ ಆದ ಕುಮಾರಸ್ವಾಮಿ, ಪಕ್ಷದಲ್ಲಿ ಇರುವವರು ಇರಬಹುದು, ಹೋಗುವವರು ಹೋಗಬಹುದು. ಇದು ಯಾರೊಬ್ಬರ ಮನೆಯ ಆಸ್ತಿಯಲ್ಲ ಎಂದು ಬಂಡಾಯಗಾರರಿಗೆ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದರು.