- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಧಿಕೃತವಾಗಿ ‘ಕೈ’ ಹಿಡಿದ ನೈಸ್‌‌‌ ಮುಖ್ಯಸ್ಥ, ಶಾಸಕ ಅಶೋಕ್‌ ಖೇಣಿ

congress [1]ಬೆಂಗಳೂರು: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಪಕ್ಷದ ಧ್ವಜ ಹಾಗೂ ಶಾಲು ಸ್ವೀಕರಿಸುವ ಮೂಲಕ ಕಾಂಗ್ರೆಸ್ ಸೇರ್ಪಡೆಯಾದರು.

ಖೇಣಿ ಸೇರ್ಪಡೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ಶಾಸಕ ಹಾಗೂ ಮಿತ್ರರಾದ ಅಶೋಕ್ ಖೇಣಿ ಯಾವುದೇ ಷರತ್ತಿಲ್ಲದೆ, ಪಕ್ಷದ ನಾಯಕತ್ವ ಹಾಗೂ ತತ್ವ ಸಿದ್ಧಾಂತವನ್ನು ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಖೇಣಿ ಕರ್ನಾಟಕ ಮಕ್ಕಳ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಮ್ಮತಿ ನೀಡಿದ್ದು, ಅವರಿಗೆ ಶುಭ ಕೋರುತ್ತೇನೆ ಎಂದರು.

ಉತ್ತರ ಕರ್ನಾಟಕ ಅದರಲ್ಲಿಯೂ ವಿಶೇಷವಾಗಿ ಬೀದರ್ ಜಿಲ್ಲೆಯಲ್ಲಿ ಖೇಣಿ ಕುಟುಂಬಕ್ಕೆ ಉತ್ತಮ ವರ್ಚಸ್ಸಿದೆ. ಖೇಣಿ ಹಾಗೂ ಅವರ ತಂದೆ ಅಲ್ಲಿ ಸಾರ್ವಜನಿಕ ಸೇವೆ ಮೂಲಕ ತಮ್ಮದೇ ಆದ ಅಸ್ತಿತ್ವವನ್ನು ಹೊಂದಿದ್ದಾರೆ. ಇದು ಪಕ್ಷಕ್ಕೆ ಸಹಕಾರಿಯಾಗಲಿದೆ. ಅಲ್ಲಿನ ಎಲ್ಲಾ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಖೇಣಿ ಸೇರ್ಪಡೆ ಬಲ ತರಲಿದೆ ಎಂದರು.

ಅಶೋಕ್ ಖೇಣಿ ಅವರನ್ನು ನಾವು ರಾಜಕೀಯವಾಗಿ ಸೇರಿಸಿಕೊಂಡಿದ್ದೇವೆ ಅಷ್ಟೇ. ಅದಕ್ಕೂ ನೈಸ್ ಅಕ್ರಮ ಆರೋಪಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಖೇಣಿ ಪರವಾಗಿ ನಿಂತು ಕಾನೂನು ವಿರುದ್ಧವಾಗಿ ನಾವು ಏನೂ ಮಾಡಲ್ಲ. ಈ ನೆಲದ ಕಾನೂನು ಉಲ್ಲಂಘಿಸಲ್ಲ. ಒಂದು ವೇಳೆ ಹಾಗಾಗಿದ್ದರೆ ನೈಸ್ ಅಕ್ರ‌ಮಕ್ಕೆ ಬೆಂಬಲದ ಪ್ರಶ್ನೆ ಉದ್ಭವವಾಗುತ್ತಿತ್ತು. ಆದರೆ ನಾವು ನೈಸ್ ಪರ ಇಲ್ಲ. ಕಾನೂನು ತನ್ನದೇ ಆದ ರೀತಿಯಲ್ಲಿ ನೈಸ್ ವಿಚಾರವಾಗಿ ಕಾರ್ಯನಿರ್ವಹಿಸಲಿದೆ ಎಂದು ಖೇಣಿ ಸೇರ್ಪಡೆಯನ್ನು ಸಮರ್ಥಿಸಿಕೊಂಡರು.

ಖೇಣಿ ಸೇರ್ಪಡೆಗೆ ಬೀದರ್ ಜಿಲ್ಲಾ ಕಾಂಗ್ರೆಸ್ ನಾಯಕರ ಅಸಮಾಧಾನವಿಲ್ಲ. ಎಲ್ಲರೊಂದಿಗೆ ಚರ್ಚಿಸಿಯೇ ನಾವು ಖೇಣಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇವೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಮೀನಾಕ್ಷಿ ಸಂಗ್ರಾಮ್ ಅವರನ್ನ ಜೊತೆಯಲ್ಲಿ ಕೂರಿಸಿಕೊಂಡೆ ಪಕ್ಷ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಪಕ್ಷದಲ್ಲಿನ ಆಂತರಿಕ ಅಸಮಾಧಾನ ಆರೋಪವನ್ನು ಪರಮೇಶ್ವರ್ ತಳ್ಳಿ ಹಾಕಿದರು.