ಸದ್ಯದಲ್ಲೇ ದುಬಾರಿಯಾಗಲಿರುವ ಆಟೋರಿಕ್ಷಾ ಪ್ರಯಾಣ ದರ

6:39 PM, Thursday, September 29th, 2011
Share
1 Star2 Stars3 Stars4 Stars5 Stars
(No Ratings Yet)
Loading...

Channappa-Gowda

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್‌.ಎಸ್‌. ಚನ್ನಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ಪೆಟ್ರೋಲ್‌ ಬೆಲೆ ಏರಿಕೆ ಹಿನ್ನಲೆಯಲ್ಲಿ ಆಟೋರಿಕ್ಷಾ ಪ್ರಯಾಣ ದರ ಪರಿಷ್ಕರಣೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಮಾಲೋಚನಾ ಸಭೆ ನಡೆಯಿತು.

ಸಭೆಯಲ್ಲಿ ವಿವಿಧ ಆಟೋರಿಕ್ಷಾ ಚಾಲಕರ ಸಂಘಟನೆಗಳ ಪ್ರತಿನಿಧಿಗಳು, ಅಟೋ ಚಾಲಕರು, ಮಾಲಕರು, ಹಾಗೂ ಬಳಕೆ ದಾರರು ಭಾಗವಹಿಸಿದ್ದರು. ಪೆಟ್ರೋಲ್‌ ದರ ಏರಿದೆ. ಖರ್ಚು ಶೇ. 40ರಷ್ಟು ಏರಿಕೆಯಾಗಿದೆ. ಕನಿಷ್ಠ ಪ್ರಯಾಣ ದರ ಮತ್ತು ಪ್ರತೀ ಕಿ.ಮೀ. ಗೆ ಈಗ ಇರುವ ದರವನ್ನು ಏರಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ದರ ಏರಿಕೆಯ ಬೇಡಿಕೆಗಳು ವಿಭಿನ್ನವಾಗಿದ್ದವು ಕನಿಷ್ಠ ಪ್ರಯಾಣ ದರ ಕನಿಷ್ಠ 18 ರೂ. ಇರಿಸಬೇಕು ಎಂದು ಒಂದು ಸಂಘಟನೆ ಹೇಳಿದರೆ, ಇನ್ನೊಂದು ಸಂಘಟನೆ 20 ರೂ., 21 ರೂ. ನಿಗದಿಪಡಿಸಬೇಕು ಎಂದು ಒತ್ತಾಯಿಸಿತು.

ಸಾಮಾಜಿಕ ಕಾರ್ಯಕರ್ತ ಸುಶೀಲ್‌ ನೊರೋನ್ಹ ಅವರು ಆಟೋ ಪ್ರಯಾಣಿಕರು ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ ಎಂದು ಹೇಳುವ ಸಂದರ್ಭದಲ್ಲಿ ಬಳಸಿದ ‘ಹಗಲು ದರೋಡೆ’ ಎನ್ನುವ ಪದ ಆಟೋ ರಿಕ್ಷಾ ಸಂಘಟನೆ ಪ್ರತಿನಿಧಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಬಳಸಿದ ಈ ಪದವನ್ನು ವಾಪಸ್‌ ಪಡೆಯಬೇಕು ಎಂದು ಮಾತಿನ ಪ್ರಹಾರಗಳು ಗಂಭೀರ ಹಂತಕ್ಕೆ ತಲುಪುವ ವೇಳೆ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿದರು.

ಜನರ ಹಿತಾಸಕ್ತಿ ಹಾಗೂ ಇತರ ಜಿಲ್ಲೆಗಳಲ್ಲಿ ಇರುವ ಪ್ರಯಾಣ ದರ ಸೇರಿದಂತೆ ಪೂರಕ ವಿಷಯಗಳನ್ನು ಪರಿಶೀಲಿಸಿ ಆಟೋರಿಕ್ಷಾ ಪ್ರಯಾಣ ದರ ಪರಿಷ್ಕರಣೆ ಕುರಿತು ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎನ್‌.ಎಸ್‌. ಚನ್ನಪ್ಪ ಗೌಡ ಅವರು ತಿಳಿಸಿದರು.

ಕೆಲವು ವರ್ಷಗಳ ಹಿಂದೆ ನಗರದ ರೈಲು ನಿಲ್ದಾಣ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಅದು ರದ್ದುಗೊಂಡಿತ್ತು. ಮಂಗಳೂರು ರೈಲು ನಿಲ್ದಾಣ ಹಾಗೂ ಬಿಜೈ ಕೆಎಸ್‌ಆಟಿಸಿ ನಿಲ್ದಾಣದಲ್ಲಿ ಅ. 2ರಂದು ಮತ್ತೆ ಪ್ರೀಪೇಡ್‌ ಅಟೋ ಸೌಲಭ್ಯ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಾಬೂರಾಮ್‌ ಅವರು ಉಪಸ್ಥಿತರಿದ್ದರು.

ಅಟೋರಿಕ್ಷಾ ಚಾಲಕರ ಸಂಘಟನೆಗಳ ಮುಖಂಡರಾದ ಬಿಎಂಎಸ್‌ ನ ವಿಶ್ವನಾಥ ಶೆಟ್ಟಿ , ಸಿಐಟಿಯು ನ ಎಲ್‌.ಟಿ. ಸುವರ್ಣ ಅಖೀಲ ಭಾರತ ಕಾಮಿಕ ಸಂಘದ ಸುದತ್‌ ಜೈನ್‌, ವಿಷ್ಣುಮೂರ್ತಿ, ಆಲಿಹಸನ್‌, ಅಶೋಕ್‌ ಶೆಟ್ಟಿ, ಅಬೂಬಕ್ಕರ್‌ ಸುರತ್ಕಲ್‌, ಪ್ರಕಾಶ್‌ ಮುಂತಾದವರು ಸಭೆಯಲ್ಲಿ ಭಾಗವಹಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English