- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರಲ್ಲಿ ನಕಲಿ ಅಂಕಪಟ್ಟಿ ಮಾರಾಟ: ಓರ್ವನ ಬಂಧನ

markscard [1]ಮಂಗಳೂರು: ತೊಕ್ಕೊಟ್ಟು ಟಿ.ಸಿ. ರಸ್ತೆಯಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಕಲ್ ಸೈನ್ಸ್ (ಎಂಐಟಿಎಸ್) ಹೆಸರಿನ ಸಂಸ್ಥೆಯಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದವನನ್ನು ನಗರ ಸಿಸಿಬಿ ಪೊಲೀಸರು ಬಂಧಿಸಿ ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಉಳ್ಳಾಲ ಟಿ.ಸಿ. ರಸ್ತೆಯ ಗೋಡ್ವಿನ್ ಡಿ.ಸೋಜಾ (33) ಎಂದು ಗುರುತಿಸಲಾಗಿದೆ. ನಕಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರವನ್ನು ತಯಾರಿಸಿ 10,000 ರಿಂದ 45,000 ರೂ.ವರೆಗೆ ಮಾರಾಟ ಮಾಡಿ ವಂಚಿಸುತ್ತಿದ್ದ. ಆರೋಪಿ ಎಂಐಟಿಎಸ್‌ಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ 2016ರಿಂದ ಸಂಸ್ಥೆಯನ್ನು ನಡೆಸುತ್ತಲೇ ಎಸ್ಎಸ್ಎಲ್‌ಸಿ, ಪಿಯುಸಿ, ಡಿಗ್ರಿ, ಡಿಪ್ಲೋಮಾ ಹೀಗೆ ವಿವಿಧ ಪದವಿಯ ನಕಲಿ ಅಂಕಪಟ್ಟಿಗಳನ್ನು ತಯಾರಿಸುತ್ತಾ 10,000 ರಿಂದ 45,000 ರೂ. ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಸಂಸ್ಥೆಯಿಂದ ಸುಮಾರು 150 ಕ್ಕೂ ಹೆಚ್ಚು ಮಂದಿ ಎಸ್ಎಸ್ಎಲ್‌ಸಿ, ಪಿಯುಸಿ, ಡಿಗ್ರಿ, ಡಿಪ್ಲೊಮಾ, ಬಿ.ಟೆಕ್ ಪದವಿಗಳ ನಕಲಿ ಅಂಕಪಟ್ಟಿಗಳನ್ನು ಪಡೆದುಕೊಂಡಿದ್ದಾರೆ. ಎಂಐಟಿಎಸ್ ಸಂಸ್ಥೆಯನ್ನು 2016 ನೇ ಜೂನ್ ತಿಂಗಳಲ್ಲಿ ಪ್ರಾರಂಭಿಸಿದ್ದು, ಇದೇ ಸಂಸ್ಥೆಯಲ್ಲಿ 2013ರಲ್ಲಿ ವ್ಯಾಸಂಗ ಮಾಡಿದ್ದಾರೆ ಎಂದು ನಕಲಿ ಸರ್ಟಿಫಿಕೇಟ್‌ಗಳನ್ನು ತಯಾರಿಸಿ ಹಣವನ್ನು ಪಡೆದು ಹಲವಾರು ಅಭ್ಯರ್ಥಿಗಳಿಗೆ ನೀಡಲಾಗಿದೆ ಎನ್ನಲಾಗಿದೆ.

ಈ ಶಿಕ್ಷಣ ಸಂಸ್ಥೆಯ ಡೈರೆಕ್ಟರ್ ಅಸ್ಕಾನ್ ಶೇಖ್ ಎಂಬಾತ ಈ ಹಿಂದೆ 2016ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪ್ ವೆಲ್ ಬಳಿ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಇಂಜಿನಿಯರಿಂಗ್ ಎಂಬ ಸಂಸ್ಥೆಯಲ್ಲಿ ಎಜುಎಕ್ಸೆಲ್ ಕನ್ಸಲ್ಟೆನ್ಸಿ ಎಂಬ ಸಂಸ್ಥೆಯನ್ನು ತೆರೆದು ಇದೇ ರೀತಿ ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಕೃತ್ಯವನ್ನು ನಡೆಸುತ್ತಿದ್ದ ಸಮಯದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು.

ಆರೋಪಿ ಗೋಡ್ವಿನ್ ಡಿಸೋಜಾ ವಶದಿಂದ ಎಂಐಟಿಎಸ್‌ನಿಂದ ನೀಡಿದೆ ಎನ್ನಲಾದ ನಕಲಿ ಸರ್ಟಿಫಿಕೇಟ್‌‌ಗಳು, ಲ್ಯಾಪ್‌ಟಾಪ್, 3 ನಕಲಿ ಸೀಲುಗಳು, ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಪ್ರಿಂಟರ್, ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಪೇಪರ್, ಐಫೋನ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಶಾಂತಾರಾಮ್, ಪಿಎಸ್ಐ ಶ್ಯಾಮ್ ಸುಂದರ್, ಕಬ್ಬಾಳ್ ರಾಜ್ ಹಾಗೂ ಉಳ್ಳಾಲ ಪಿಎಸ್ಐ ಗುರಪ್ಪ ಕಾಂತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.