- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದೋಣಿ ದಟ್ಟಣೆ ನಿವಾರಣೆಗೆ ಪೂರಕ: ಸಚಿವ ಪ್ರಮೋದ್‌

bhaskar-moily [1]ಮಂಗಳೂರು: ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ದೋಣಿಗಳ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸುಲ್ತಾನ್‌ ಬತ್ತೇರಿ ಬಳಿಯಲ್ಲಿ ನಿಲುಗಡೆ (ಐಡಲ್‌ಬರ್ತಿಂಗ್‌) ಜೆಟ್ಟಿಯನ್ನು ನಿರ್ಮಿಸಲಾಗಿದ್ದು, ಇದರಿಂದಾಗಿ ಮೀನುಗಾರರಿಗೆ ಅನುಕೂಲವಾಗಲಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಸುಲ್ತಾನ್‌ಬತ್ತೇರಿಯಲ್ಲಿ 5 ಕೋ. ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಸುಸಜ್ಜಿತ ನಿಲುಗಡೆ ಜೆಟ್ಟಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಐದು ಕೋ. ರೂ. ವೆಚ್ಚದಲ್ಲಿ 102 ಮೀ. ಉದ್ದದ ಈ ಜಟ್ಟಿ ನಿರ್ಮಾಣಗೊಂಡಿದ್ದು, ಇದರಿಂದ ಈ ಪ್ರದೇಶದ ಮೀನುಗಾರರಿಗೆ ತಮ್ಮ ದೋಣಿ ನಿಲುಗಡೆಗೊಳಿಸಲು ಅನುಕೂಲವಾಗಲಿದೆ. ಸುಮಾರು 50 ದೋಣಿಗಳನ್ನು ಇಲ್ಲಿ ನಿಲುಗಡೆ ಮಾಡಬಹುದಾಗಿದೆ. ಜತೆಗೆ ಹಾರ್ಡ್‌ ಸಫೇìಸ್‌ನಲ್ಲಿ ಮೀನುಗಾರಿಕೆ ಬಲೆಗಳನ್ನು ದುರಸ್ತಿ ಮಾಡಬಹುದು. ಹಾರ್ಡ್‌ ಸಫೇìಸ್‌ ಉದ್ದ 102ಗಿ8 ಮೀ., ಸಂಪರ್ಕ ರಸ್ತೆ 300 ಮೀ. ಆಗಿದ್ದು, 28,000 ಘ. ಮೀ. ಹೂಳೆತ್ತುವುದು ಕೂಡ ಈ ಕಾಮಗಾರಿಯಲ್ಲಿ ಸೇರಿದೆ. ಈ ಮೂಲಕ ಮೀನುಗಾರಿಕೆ ಇಲಾಖೆಯನ್ನು ಉನ್ನತಿಗೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಶಾಸಕ ಜೆ.ಆರ್‌. ಲೋಬೋ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಮಹೇಶ್‌ ಕುಮಾರ್‌ ಅವರು ಮಾತನಾಡಿ, ಮೀನುಗಾರರು ಹಿಡಿದ ಮೀನುಗಳನ್ನು ಮಂಗಳೂರು ಬಂದರಿನಲ್ಲಿ ಇಳಿಸಿ ಬಳಿಕ ಸುಲ್ತಾನ್‌ಬತ್ತೇರಿ ಜೆಟ್ಟಿಯಲ್ಲಿ ಬೋಟ್‌ ನಿಲುಗಡೆಗೊಳಿಸಲು ಅನುಕೂಲವಾಗಲಿದೆ. ಶಾಸಕ ಜೆ.ಆರ್‌. ಲೋಬೊ ಅವರ ಪ್ರಸ್ತಾವನೆಯ ಮೇರೆಗೆ ಮೀನುಗಾರಿಕೆ ಇಲಾಖೆಯು ನಬಾರ್ಡ್‌ನ ಆರ್‌ಐಡಿಎಫ್‌ 19ರ ಮೂಲಕ 100 ಮೀ. ಉದ್ದದ ಜೆಟ್ಟಿ ನಿರ್ಮಾಣಕ್ಕೆ 5 ಕೋ. ರೂ. ಅನುದಾನ ಮಂಜೂರು ಮಾಡಿತ್ತು. ಐಡಲ್‌ ಬರ್ತಿಂಗ್‌ ಜೆಟ್ಟಿಯಲ್ಲಿ ದೋಣಿಗಳಲ್ಲಿ ಹಿಡಿದುತಂದ ಮೀನುಗಳನ್ನು ಇಳಿಸಲು ಅವಕಾಶವಿಲ್ಲ, ಇಲ್ಲಿ ದೋಣಿ ನಿಲುಗಡೆಗೆ ಮಾತ್ರ ಅವಕಾಶವಿರುತ್ತದೆ. ಪ್ರಸ್ತುತ ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ಸ್ಥಳಾವಕಾಶದ ಕೊರತೆ ಇರುವ ಹಿನ್ನೆಲೆಯಲ್ಲಿ ಈ ಜೆಟ್ಟಿಯನ್ನು ನಿರ್ಮಿಸಲಾಗಿದೆ.

ಸುಮಾರು 30 ಬೋಟ್‌ಗಳನ್ನು ನಿಲ್ಲಿಸಲು ಇಲ್ಲಿ ಅವಕಾಶವಿದೆ. ಬೋಳೂರಿನಲ್ಲಿ ಜೆಟ್ಟಿ ನಿರ್ಮಾಣವಾಗಿರುವುದರಿಂದ ಬೋಳೂರು, ಬೊಕ್ಕಪಟ್ಣ ಭಾಗದ ಮೀನುಗಾರರು ತಮ್ಮ ದೋಣಿಗಳನ್ನು ಇಲ್ಲಿ ನಿಲ್ಲಿಸಬಹುದಾಗಿದೆ. ದೋಣಿಗಳ ದುರಸ್ತಿ ಕಾರ್ಯಕ್ಕೂ ಇಲ್ಲಿ ಅವಕಾಶವಿರುತ್ತದೆ ಎಂದರು.

ಮೇಯರ್‌ ಭಾಸ್ಕರ ಕೆ., ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಪ್ರವೀಣ್‌ಚಂದ್ರ ಆಳ್ವ, ಸದಸ್ಯರಾದ ಸಬಿತಾ ಮಿಸ್ಕಿತ್‌, ಲತಾ ಸಾಲ್ಯಾನ್‌, ಮೀನುಗಾರಿಕೆ ಮುಖಂಡರಾದ ವಾಸುದೇವ ಬೋಳೂರು, ಮೋಹನ್‌ ಬೆಂಗ್ರೆ ಉಪಸ್ಥಿತರಿದ್ದರು.