- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅವ್ರು ಕೊನೆಗೂ ನಿಜ ಹೇಳಿದ್ದಾರೆ: ಶಾ ಯಡವಟ್ಟು ಕೈ ನಾಯಕರಿಗೆ ವರಪ್ರಸಾದ!

rahul-gandhi [1]ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಷಣ ಸಂದರ್ಭ ಸಿಎಂ ಸಿದ್ದರಾಮಯ್ಯ ಸರ್ಕಾರ ಅನ್ನುವ ಬದಲು ಬಿ.ಎಸ್. ಯಡಿಯೂರಪ್ಪ ಸರ್ಕಾರ ಅತ್ಯಂತ ಭ್ರಷ್ಟ ಎಂದು ಹೇಳಿ ಮಾಡಿಕೊಂಡಿರುವ ಯಡವಟ್ಟು, ಕಾಂಗ್ರೆಸ್ ನಾಯಕರಿಗೆ ವರವಾಗಿ ಲಭಿಸಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಅಮಿತ್ ಶಾ ಸುದ್ದಿಗೋಷ್ಟಿಯಲ್ಲಿ ನೀಡಿದ ಹೇಳಿಕೆ ಇದೀಗ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಅಸ್ತ್ರವಾದಂತಾಗಿದೆ.

ಬಿ.ಎಸ್. ಯಡಿಯೂರಪ್ಪ ಭ್ರಷ್ಟಾಚಾರಿ ಎಂದು ಅಮಿತ್ ಶಾ ಕೊನೆಗೂ ಸತ್ಯ ಹೇಳಿದ್ದಾರೆ. ವಿಧಾನಸಭೆ ಚುನಾವಣೆಗೆ ಶಾ ನಮಗೆ ದೊಡ್ಡ ಗಿಫ್ಟ್ ನೀಡಿದ್ದಾರೆ. ಯಡಿಯೂರಪ್ಪ ಭ್ರಷ್ಟ ಎನ್ನುವ ಮೂಲಕ ಒಳ್ಳೆ ಉಡುಗೊರೆ ಕೊಟ್ಟಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಚುನಾವಣಾ ಆಯೋಗದ ಸುದ್ದಿಗೋಷ್ಟಿಗೂ ಮುನ್ನ ಬಿಜೆಪಿ ಐಟಿ ಸೆಲ್ ಮೂಲಕ ಚುನಾವಣಾ ದಿನಾಂಕ ಘೋಷಣೆ ಮಾಡಿರುವ ಬಗ್ಗೆ ಮತ್ತೊಮ್ಮೆ ಅನುಮಾನ ವ್ಯಕ್ತಪಡಿಸಿದ್ದು, ಪಾರದರ್ಶನಕವಾಗಿ ಚುನಾವಣೆ ನಡೆಯುವುದಿಲ್ಲ ಎನ್ನುವ ಬಗ್ಗೆ ನಾವು ನಡೆಸಿದ್ದ ಸಿಕ್ರೇಟ್ ಕ್ಯಾಂಪೇನ್ ವಿಡಿಯೋದ ಪ್ರಿವ್ಯೂವ್ ಇದಾಗಿದೆ ಎಂದು ಇದೇ ಟ್ವೀಟ್‌ನಲ್ಲಿ ರಾಹುಲ್ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಗ್ಗೆ ಕೊನೆಗೂ ಅಮಿತ್‌‌ ಶಾ ನಿಜ ಹೇಳಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ಅಲ್ಲದೇ ವಿಧಾನಸೌಧ ಮುಂಭಾಗ ಮಾತನಾಡಿ, ಕೊನೆಗೂ ಸತ್ಯ ಹೊರಬಿದ್ದಿದೆ. ಬಹಳ ವರ್ಷದ ನಂತರ ಶಾ ಸತ್ಯ ಹೇಳಿದ್ದಾರೆ ಎಂದರು.

ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಶಾ ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರು. ಅವರೇ ಹೇಳಿದ್ದಾರೆ ಎಂದಮೇಲೆ ನಾವೆಲ್ಲಾ ನಂಬಲೇಬೇಕಾಗುತ್ತದೆ. ಅವರ ಬಾಯಲ್ಲಿ ಈಗಲಾದರೂ ಸತ್ಯ ಬಯಲಾಗಿದೆ. ಶಾ ಹೇಳಿರುವ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದು, ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇವೆ ಎಂದರು.

ಸಚಿವ ಯು.ಟಿ. ಖಾದರ್ ಮಾತನಾಡಿ, ದೇವರು ಅಮಿತ್ ಶಾ ಬಾಯಲ್ಲಿ ಈ ವಿಚಾರ ಹೇಳಿಸಿದ್ದಾನೆ ಎಂದರು. ಸಚಿವ ಕೆ.ಜೆ. ಜಾರ್ಜ್ ಮಾತನಾಡಿದ್ದು, ಸತ್ಯ ಯಾವತ್ತಿದ್ದರೂ ಹೊರಬರಲೇಬೇಕು.ಪಾರದರ್ಶಕ ಚುನಾವಣೆಗೆ ಆಯೋಗ ಅವಕಾಶ ಮಾಡಿಕೊಡುತ್ತದೆ ಎನ್ನುವ ವಿಶ್ವಾಸ ಇದೆ. ನಾವು ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದಿದ್ದಾರೆ.

ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಶಾ ಮನಸ್ಸಿನಲ್ಲಿರುವುದು ಬಾಯಿಗೆ ಬಂದಿದೆ. ಯಡಿಯೂರಪ್ಪ ಬಗ್ಗೆ ಇರುವುದನ್ನು ಅವರು ಹೇಳಿದ್ದಾರೆ. ಅದನ್ನೇ ದೊಡ್ಡದು ಮಾಡುವುದು ಕೂಡ ಸರಿಯಲ್ಲ. ಇಲ್ಲಿಗೆ ಬಿಟ್ಟು ಬಿಡೋಣ ಎಂದರು.