- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರಿನಲ್ಲಿ ಆಟೋ ರಿಕ್ಷಾ ಪ್ರೀಪೇಯ್ಡ ಸೇವಾ ಕೌಂಟರ್‌ ಪುನರಾರಂಭ

Auto Pre Paid counter [1]

ಮಂಗಳೂರು: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಮತ್ತು ಬಿಜೈ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣಗಳಲ್ಲಿ ಆಟೋ ರಿಕ್ಷಾ ಪ್ರೀಪೇಯ್ಡ ಕೌಂಟರ್‌ಗಳನ್ನು ರವಿವಾರ ಆರಂಭಿಸಲಾಯಿತು. ದ.ಕ. ಜಿಲ್ಲಾಡಳಿತ, ಸಾರಿಗೆ ಇಲಾಖೆ ಮತ್ತು ಪೊಲೀಸ್‌ ಇಲಾಖೆಯ ಸಹಕಾರದಲ್ಲಿ ಎಸೋಸಿಯೇಶನ್‌ ಆಫ್‌ ಟ್ರಾವಲ್‌ ಏಜಂಟ್ಸ್‌ ಈ ಕೌಂಟರ್‌ಗಳನ್ನು ನಿರ್ವಹಣೆ ಮಾಡಲಿದೆ.

ರೈಲು ನಿಲ್ದಾಣದಲ್ಲಿ ಆಟೋ ರಿಕ್ಷಾ ಪ್ರೀಪೇಯ್ಡ ಕೌಂಟರ್‌ನ್ನು ಜಿಲ್ಲಾಧಿಕಾರಿ ಡಾ| ಎನ್‌. ಎಸ್‌. ಚನ್ನಪ್ಪ ಗೌಡ ಅವರು ಉದ್ಘಾಟಿಸಿದರು. ಬಳಿಕ ಮಾತನಾದಿದ ಅವರು ಪ್ರೀಪೇಯ್ಡ ಕೌಂಟರ್‌ನಲ್ಲಿ ಕೌಂಟರ್‌ ನಿರ್ವಹಣೆಗಾಗಿ 1 ರೂ.ವನ್ನು ಪ್ರಯಾಣಿಕರಿಂದ ವಸೂಲು ಮಾಡಲಾಗುತ್ತದೆ. ಪ್ರಯಾಣದ ಬಾಡಿಗೆ ದರವನ್ನು ಪ್ರಯಾಣದ ಗುರಿ ತಲುಪಿದ ಬಳಿಕ ಪ್ರಯಾಣಿಕರು ರಿಕ್ಷಾ ಚಾಲಕರಿಗೆ ಪಾವತಿಸ ಬೇಕಾಗಿದೆ. ರಿಕ್ಷಾ ಹತ್ತುವಾಗ ನಿಗದಿತ ಪ್ರಯಾಣ ದರದ ಚೀಟಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣದಲ್ಲಿ ಆಟೋ ರಿಕ್ಷಾ ಪ್ರೀಪೇಯ್ಡ ಕೌಂಟರ್‌ನ್ನು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷೆ ಲತಾ ಕಿಣಿ ಅವರು ಉದ್ಘಾಟಿಸಿದರು. ಪ್ರೀಪೇಯ್ಡ ಕೌಂಟರ್‌ ನಿಂದ ಜನರಿಗೆ ಪ್ರಾಮಾಣಿಕ ಹಾಗೂ ಸುರಕ್ಶಿತ ಸೇವೆ ಸಿಗಲಿ ಎಂದು ಅವರು ಹಾರೈಸಿದರು.

ಮಂಗಳೂರು ಪೊಲೀಸ್‌ ಅಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಾಬೂರಾಮ್‌, ಆರ್‌.ಟಿ.ಒ. ಮಲ್ಲಿಕಾರ್ಜುನ, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಸಾರಿಗೆ ವಿಭಾಗದ ಪ್ರತಿನಿಧಿ ಪ್ರವೀಣ್‌ಚಂದ್ರ, ದ.ಕ. ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘಗಳ ಸಮನ್ವಯ ಸಮಿತಿ ಕಾರ್ಯದರ್ಶಿ ಬಿ. ವಿಷ್ಣುಮೂರ್ತಿ, ಉಪಾಧ್ಯಕ್ಷ ಅಶೋಕ್‌ ಕುಮಾರ್‌ ಶೆಟ್ಟಿ ಬೋಳಾರ, ಮಂಗಳೂರು ಎಸೋಸಿಯೇಶನ್‌ ಆಫ್‌ ಟ್ರಾವೆಲ್‌ ಏಜಂಟ್ಸ್‌ ಇದರ ಅಧ್ಯಕ್ಷ ರೋಶನ್‌ ಪಿಂಟೊ, ಮಲಯಾಳಿ ಸಮಾಜಂ ಮಂಗಳೂರು ಇದರ ಅಧ್ಯಕ್ಷ ದೊಮಿನಿಕ್‌ ಜೋಸ್‌, ಉಪಾಧ್ಯಕ್ಷ ಗಗನನ್‌, ಕಾರ್ಯದರ್ಶಿ ಎಸ್‌.ಕೆ. ಕುಟ್ಟಿ, ಜತೆ ಕಾರ್ಯದರ್ಶಿ ರಂಜಿತ್‌ ಮೊದಲಾದವರು ಉಪಸ್ಥಿತರಿದ್ದರು.