- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು ವಿಮಾನ ನಿಲ್ದಾಣದಲ್ಲಿ ಇನ್ಮುಂದೆ ಮಲ್ಲಿಗೆಯ ಕಂಪು

airport [1]ಮಂಗಳೂರು: ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕ ವಿ.ವಿ.ರಾವ್, ವಿಮಾನದಿಂದ ಇಳಿದು ಮಂಗಳೂರು ವಿಮಾನ ನಿಲ್ದಾಣದ ಹೊರಗೆ ಬರಬೇಕಾದರೆ ಇನ್ನು ಮಲ್ಲಿಗೆಯ ಸುವಾಸನೆ ಸ್ವಾಗತಿಸಲಿದೆ. ಜಾಗತಿಕವಾಗಿ ಮನ್ನಣೆ ತಂದುಕೊಟ್ಟ ಮಂಗಳೂರು ಮಲ್ಲಿಗೆಯ ಖ್ಯಾತಿಯನ್ನು ಇನ್ನಷ್ಟು ಪಸರಿಸಲು ಹೊರಹೋಗುವ ಪ್ರಯಾಣಿಕರಿಗೆ ಮಲ್ಲಿಗೆಯ ಕಂಪು ಘಮಿಸಲಿದೆ ಎಂದು ಹೇಳಿದರು.

ಇದಲ್ಲದೆ ವಿಮಾನ ನಿಲ್ದಾಣದ ಒಳಹೊರಗು ಗೋಡೆಗಳಲ್ಲಿ ಮಂಗಳೂರಿನ ಪ್ರಾದೇಶಿಕತೆ, ಸಂಸ್ಕೃತಿಯನ್ನು ಸಾರುವ ಚಿತ್ರಪಟಗಳು ಕಣ್ಮನ ಸೆಳೆಯಲಿವೆ. ಇದಕ್ಕಾಗಿಯೇ ಸುಮಾರು 1 ಕೋಟಿ ರೂ. ವೆಚ್ಚ ಮಾಡಲಾಗುವುದು. ಇದರಿಂದಾಗಿ ಮಂಗಳೂರಿನ ಸಂಸ್ಕೃತಿಯ ಸೊಗಡನ್ನು ವಿಮಾನ ನಿಲ್ದಾಣದಲ್ಲೇ ಅವಲೋಕಿಸಬಹುದು ಎಂದರು.

ಅಲ್ಲದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಸೇವೆ ಆರಂಭವಾಗಲಿದೆ. ಚೆನ್ನೈ ಹಾಗೂ ಗೋವಾ ಸೇರಿದಂತೆ ದೇಶದ ಐದು ವಿಮಾನ ನಿಲ್ದಾಣಗಳಲ್ಲಿ ಪ್ರಥಮ ಹಂತದಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಸೇವೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಈಗ ಎರಡನೇ ಹಂತದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಇದನ್ನು ಜಾರಿಗೆ ತರಲು ವಿಮಾನ ನಿಲ್ದಾಣ ಪ್ರಾಧಿಕಾರ ಉದ್ದೇಶಿಸಿದೆ. ಈ ಬಗ್ಗೆ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದ್ದು, ಇನ್ನು ಒಂದು ತಿಂಗಳಲ್ಲಿ ಟೆಂಡರ್‌‌ ಅಂತಿಮಗೊಳಿಸಲಾಗುವುದು ರಾವ್‌ ತಿಳಿಸಿದ್ದಾರೆ.