- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪತಿಯನ್ನು ಕಳೆದುಕೊಂಡ ಮಹಿಳೆಯರಿಂದ ಹೋಮದ ಪೂರ್ಣಾಹುತಿ

Janardhana-poojary [1]

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ, ಮಂಗಳೂರು ದಸರಾ ಸಂಭ್ರಮದಲ್ಲಿ ಸೋಮವಾರ ಪತಿಯನ್ನು ಕಳೆದುಕೊಂಡ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಸಮಾಜದಲ್ಲಿ ನೆಲೆಯೂರಿರುವ ಅನಿಷ್ಟ ಪದ್ಧತಿಯೆನಿಸಿ ಕೊಂಡ ವಿಧವಾ ಪದ್ದತಿಯನ್ನು ಧಿಕ್ಕರಿಸಲು ಪತಿಯನ್ನು ಕಳೆದುಕೊಂಡ ಸುಮಾರು 2,500 ಮಹಿಳೆಯರ ಪಾಲ್ಗೊಳ್ಳುವಿಕೆಯೊಂದಿಗೆ ಚಂಡಿಕಾಹೋಮ, ಬೆಳ್ಳಿ ರಥೋತ್ಸವ ನಡೆಸಿ ವಿಧವೆಯರಿಗೆ ಸೀರೆ, ಕುಂಕುಮ, ಹೂವು, ಬಳೆಯನ್ನು ಪ್ರಸಾದ ರೂಪದಲ್ಲಿ ನೀಡಲಾಯಿತು.

ಬಿ. ಜನಾರ್ದನ ಪೂಜಾರಿ ಅವರು, ಹೋಮದ ಸಂಕಲ್ಪ ವಿಧಿಯನ್ನು ನೆರವೇರಿಸಿದ ಬಲಿಕ ಮಾತನಾಡಿ ಭಾರತದಲ್ಲಿ ಮಹಿಳೆಯರಿಗೆ ಮಾತೃ ಸ್ಥಾನವನ್ನು ನೀಡಲಾಗಿದೆ. ಪತಿಯನ್ನು ಕಳೆದುಕೊಂಡ ಮಹಿಳೆಯರನ್ನು ಅಗೌರವದಿಂದ ನಡೆಸಿಕೊಳ್ಳುವ ಪದ್ಧತಿ ಸರಿಯಲ್ಲ ಅದಕ್ಕಗಿ ಶ್ರೀ ಕ್ಷೇತ್ರದ ವತಿಯಿಂದ ಸಾಮಾಜಿಕ ಪರಿವರ್ತನೆಯೊಂದಕ್ಕೆ ಚಾಲನೆ ನೀಡಲಾಗಿದೆ ಎಂದರು.

ಪತಿಯನ್ನು ಕಳೆದುಕೊಂಡ ಮಹಿಳೆಯರಿಂದ ಹೋಮದ ಪೂರ್ಣಾಹುತಿಯನ್ನು ಅರ್ಪಿಸಲಾಯಿತು. ಶ್ರೀ ಅನ್ನಪೂರ್ಣೇಶ್ವರಿ ಹಾಗೂ ಶ್ರೀ ಗೋಕರ್ಣನಾಥ ದೇವರು ಆರೂಢರಾಗಿದ್ದ ಬೆಳ್ಳಿಯ ರಥದ ಎದುರು ತೆಂಗಿನಕಾಯಿ ಒಡೆದು ರಥವನ್ನು ದೇವಳದ ಸುತ್ತ ಸರದಿಯಂತೆ ಮೂರು ಬಾರಿ ಎಳೆದರು.

ರಥೋತ್ಸವದ ಬಳಿಕ ಗೋಕರ್ಣನಾಥ ಹಾಗೂ ಅನ್ನಪೂರ್ಣೇಶ್ವರಿ ದೇವಿಯ ಮುಂಭಾಗದಲ್ಲಿ ವಿಶೇಷ ಪೂಜೆ ನೆರವೇರಿತು. ಪತಿಯನ್ನು ಕಳೆದುಕೊಂಡ ಮಹಿಳೆಯರು ಗೋಕರ್ಣನಾಥ ದೇವರಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಅವರಿಗೆ ಜನಾರ್ದನ ಪೂಜಾರಿ ಅವರು ಆರತಿ ಬೆಳಗಿ ಗೌರವಾರ್ಪಣೆ ಸಲ್ಲಿಸಿದರು.

ಶ್ರೀ ಅನ್ನಪೂರ್ಣೇಶ್ವರಿಯ ಸನ್ನಿಧಾನದಲ್ಲಿ ಪ್ರಸಾದ ವಿತರಿಸಲಾಯಿತು. ಸೀರೆ, ಕುಂಕುಮ ತುಂಬಿದ ಕರಡಿಗೆ, ಹೂವು, ಬಳೆ ಹಾಗೂ 5 ರೂಪಾಯಿ ನಾಣ್ಯವನ್ನು ಪ್ರಸಾದ ರೂಪದಲ್ಲಿ ಬಿ. ಜನಾರ್ದನ ಪೂಜಾರಿ ವಿತರಿಸಿದರು. ಮಹಿಳೆಯರು ದೇವರ ಸಮ್ಮುಖದಲ್ಲಿ ಕುಂಕುಮ ಇಟ್ಟು, ಹೂ ಮುಡಿದು, ಬಳೆಗಳನ್ನು ತೊಟ್ಟರು. ಬಳಿಕ ಅನ್ನಸಂತರ್ಪಣೆ ನೆರವೇರಿತು.