ಪಾಟ್ನಾ: ಕೇವಲ ಒಂದೇ ವಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ 8.5 ಲಕ್ಷ ಶೌಚಾಲಯ ನಿರ್ಮಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದಿಸಿದ್ದರು. ಆದರೆ ಇದರ ವಿರುದ್ಧ ವಿಪಕ್ಷಗಳು ತಿರುಗಿ ಬಿದ್ದಿದ್ದು, ಪ್ರಧಾನಿ ಮೋದಿ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿವೆ.
ಬಿಹಾರದ ಮೋತಿಹಾರಿಯಲ್ಲಿ ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಸುಮಾರು 20,000 ಸ್ವಚ್ಛ ರಾಯಭಾರಿಗಳನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಈ ಮೇಲಿನ ಹೇಳಿಕೆ ನೀಡಿದ್ದರು.
ಆದರೆ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಟ್ವೀಟ್ ಮೂಲಕ ಪ್ರಶ್ನಿಸಿರುವ ತೇಜಸ್ವಿ ಯಾದವ್, ವಾರವೊಂದಕ್ಕೆ 8.5 ಲಕ್ಷ ಶೌಚಾಲಯಗಳೆಂದರೆ ನಿಮಿಷಕ್ಕೆ 84 ಶೌಚಾಲಯಗಳೆಂದು ಅರ್ಥ. ಇದು ಪ್ರಧಾನಿಯಿಂದ ನಡೆದ ದೊಡ್ಡ ಪ್ರಮಾದ, ನಿತೀಶ್ ಕುಮಾರ್ ಅವರೇ ಇದನ್ನು ಒಪ್ಪಲ್ಲ ಎಂದೂ ಅವರು ಟೀಕಿಸಿದ್ದಾರೆ.
ಇದೇ ವೇಳೆ ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಸಂಜಯ್ ನಿರುಪಮ್ ಕೂಡ ಟೀಕಿಸಿದ್ದು ಇಷ್ಟೊಂದು ಸಂಖ್ಯೆಯ ಶೌಚಾಲಯಗಳನ್ನು ಇಷ್ಟೊಂದು ವೇಗದಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ಇದರರ್ಥ ಪ್ರತಿ ಸೆಕೆಂಡಿಗೆ 1.4 ಶೌಚಾಲಯ. ಇದು ಸಾಧ್ಯ ಎಂದು ನನಗನಿಸುತ್ತಿಲ್ಲ ಎಂದು ಹೇಳಿದ್ದಾರೆ.
ಬಿಹಾರ ಸರ್ಕಾರದ ಮೂಲಗಳ ಪ್ರಕಾರ 8.5 ಲಕ್ಷ ಶೌಚಾಲಯಗಳನ್ನು ಮಾರ್ಚ್ 13 ಹಾಗೂ ಎಪ್ರಿಲ್ 9ರ ನಡುವೆ ನಿರ್ಮಿಸಲಾಗಿತ್ತು. ಇವುಗಳಲ್ಲಿ ಅರ್ಧದಷ್ಟು ಶೌಚಾಲಯಗಳನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದ ದಿನಾಂಕಕ್ಕಿಂತ ಒಂದು ವಾರ ಮುನ್ನವೇ ನಿರ್ಮಾಣಗೊಂಡಿದ್ದವು. ಅವುಗಳಿಗೆ ಜಿಪಿಎಸ್ ಟ್ರ್ಯಾಕ್ ಆಗಿರಲಿಲ್ಲ ಎನ್ನಲಾಗಿದೆ.
Click this button or press Ctrl+G to toggle between Kannada and English