- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರಚಾರದ ಅಖಾಡ ರಂಗೇರಿಸಲು ‘ಕೈ’ ವಿಶೇಷ ಕಾರ್ಯತಂತ್ರ: ನಾಳೆ ರಾಜ್ಯಕ್ಕೆ ರಾಹುಲ್ ಗಾಂಧಿ

rahul-gandhi [1]ಬೆಂಗಳೂರು: ಪ್ರಚಾರದ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದುವರೆಗೂ ನಾಮಪತ್ರ ಸಲ್ಲಿಕೆ ಸಿದ್ಧತೆ, ಟಿಕೆಟ್ ಸಿಗದ ಆತಂಕ, ಬಂಡಾಯ, ಟಿಕೆಟ್ ಸಿಗುವ ನಿರೀಕ್ಷೆ ಇತ್ಯಾದಿಗಳಲ್ಲಿ ಪ್ರಚಾರದತ್ತ ಹೆಚ್ಚು ಗಮನಹರಿಸದ ನಾಯಕರು ಇಂದಿನಿಂದ ಇದೇ ಕಾಯಕದಲ್ಲಿ ನಿರತವಾಗಲಿದ್ದಾರೆ.

ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ಪ್ರಚಾರ ನಡೆಸಿದರೆ, ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ಮಾಡಲಿದೆ. ರಾಷ್ಟ್ರೀಯ ಪಕ್ಷಗಳಿಂದ ಬಂಡಾಯವೆದ್ದು ಬಂದಿರುವವರಿಂದ ನಿರೀಕ್ಷೆಗೂ ಮೀರಿದ ಉತ್ಸಾಹ ಪಡೆದಿರುವ ಜೆಡಿಎಸ್ ಕೂಡ ಹೊಸ ಉತ್ಸಾಹದೊಂದಿಗೆ ಪ್ರಚಾರಕಣಕ್ಕಿಳಿಯಲಿದೆ. ಇದರ ಜತೆ ಆಮ್ ಆದ್ಮಿ ಪಕ್ಷ, ಕನ್ನಡ ಪಕ್ಷ, ಎಂಇಪಿ. ಬಿಎಸ್‍ಪಿ ಸೇರಿದಂತೆ ಹಲವು ಪಕ್ಷದ ಅಭ್ಯರ್ಥಿಗಳು ತಮ್ಮದೇ ನಾಯಕರನ್ನು ಮುಂದಿಟ್ಟುಕೊಂಡು ಪ್ರಚಾರದ ಅಖಾಡಕ್ಕೆ ಇಳಿಯಲಿವೆ.

ಮತದಾರರ ಓಲೈಕೆಗೆ ಯಾವ ಪ್ರದೇಶದಲ್ಲಿ ಯಾವ ಪ್ರಭಾವಿ ವ್ಯಕ್ತಿಯನ್ನು ಪ್ರಚಾರದ ಕಣಕ್ಕಿಳಿಸಬೇಕೆಂಬ ಲೆಕ್ಕಾಚಾರದಲ್ಲಿ ವಿವಿಧ ಪಕ್ಷಗಳು ತೊಡಗಿವೆ. ಬಿಜೆಪಿ, ಕಾಂಗ್ರೆಸ್ ಅದಾಗಲೇ ತಮ್ಮ ಪ್ರಚಾರ ತಂತ್ರಗಾರಿಕೆ ಹೆಣೆದಿವೆ.

ನಾಲ್ಕು ವಿಭಾಗಗಳಲ್ಲಿ ಅಭ್ಯರ್ಥಿಗಳ ಪರ ನಾಯಕರು ಕ್ಯಾಂಪೇನ್ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಚುನಾವಣೆಗೆ ಕೆಲವೇ ದಿನ ಇರುವುದರಿಂದ ಎಲ್ಲಾ 224 ಕ್ಷೇತ್ರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಬದಲು ಪ್ರತಿ ಲೋಕಸಭೆ ಕ್ಷೇತ್ರದ ಕೇಂದ್ರಭಾಗದಲ್ಲಿ ಒಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಒಂದು ದಿನಕ್ಕೆ ಎರಡು ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಹಮ್ಮಿಕೊಳ್ಳುವ ಮೂಲಕ ಒಟ್ಟು 12 ರಿಂದ 14 ದಿನದಲ್ಲಿ ಪ್ರಚಾರ ಕಾರ್ಯ ಪೂರ್ಣಗೊಳಿಸಲು ಕಾಂಗ್ರೆಸ್ ನಾಯಕರು ಯೋಜನೆ ರೂಪಿಸಿದ್ದಾರೆ.

ಕ್ಷೇತ್ರಗಳನ್ನು ವಿಂಗಡಣೆ ಮಾಡುವ ಮೂಲಕ ಪ್ರಚಾರ ತಂತ್ರ ಹೆಣೆಯಲಾಗಿದೆ. ಯಾವ ನಾಯಕರು ಯಾವ ಕ್ಷೇತ್ರದಲ್ಲಿ ಪ್ರಚಾರ ಮಾಡಬೇಕು ಎನ್ನುವುದನ್ನು ವಿಭಾಗಿಸಲಾಗಿದೆ. ಬೆಂಗಳೂರು, ಮಂಗಳೂರು, ಬೆಳಗಾವಿ, ಕಲಬುರುಗಿ ವಿಭಾಗದಲ್ಲಿ ಪ್ರತ್ಯೇಕ ಪಟ್ಟಿ ಮಾಡುವ ಕಾರ್ಯ ಆಗುತ್ತಿದೆ. ಪ್ರಚಾರದ ಅಖಾಡದಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್.ಆರ್. ಪಾಟೀಲ್, ದಿನೇಶ್ ಗುಂಡೂರಾವ್, ಸಚಿವ ಡಿ.ಕೆ. ಶಿವಕುಮಾರ್, ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಇದ್ದಾರೆ. ಇವರು ಪ್ರತ್ಯೇಕವಾಗಿ ತೆರಳಿ ಸಭೆ, ಸಮಾರಂಭ ನಡೆಸಲಿದ್ದಾರೆ.

ಏ.26ಕ್ಕೆ ಅಂದರ ನಾಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಬೃಹತ್ ಸಮಾವೇಶ ನಡೆಸಲಿದ್ದಾರೆ. ರಾಹುಲ್‍ಗೆ ಸಿಎಂ ಸಿದ್ದರಾಮಯ್ಯ ಸಾಥ್ ನೀಡಲಿದ್ದಾರೆ. 4 ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಮಾಡಲಿದ್ದು, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಉತ್ತರಕನ್ನಡ, ದಕ್ಷಿಣಕನ್ನಡ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹುರಿದುಂಬಿಸಲಿದ್ದಾರೆ. ಗೋವಾ ಮೂಲಕ ನಾಳೆ ಬೆಳಗ್ಗೆ ರಾಜ್ಯಕ್ಕಾಗಮಿಸಲಿರುವ ರಾಹುಲ್ ಗಾಂಧಿ 12-30 ಕ್ಕೆ ಅಂಕೋಲಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ ಮಧ್ಯಾಹ್ನ 2-45 ಕ್ಕೆ ಕುಮಟಾದ ಗಿಬ್ ಹೈಸ್ಕೂಲ್ ಮೈದಾನದ ಬಳಿ ಪ್ರಚಾರ ನಡೆಸಲಿದ್ದು, ಸಂಜೆ 5 ಗಂಟೆಗೆ ಭಟ್ಕಳದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ರಾತ್ರಿ ಮುರ್ಡೇಶ್ವರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಏಪ್ರಿಲ್ 27 ರಂದು ಬೆಳಗ್ಗೆ 10 ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದು, ಮಧ್ಯಾಹ್ನ 1.30 ಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥನ ದರ್ಶನ ಪಡೆಯಲಿದ್ದಾರೆ. ಸಂಜೆ 5.30 ಕ್ಕೆ ಗೋಣಿಕೊಪ್ಪಲಿನಲ್ಲಿ ಕಾರ್ನರ್ ಸಮಾವೇಶದಲ್ಲಿ ಭಾಗಿಯಾಗಿ, ಸಂಜೆ 6 ಗಂಟೆಗೆ ಪಿರಿಯಾಪಟ್ಟಣದಲ್ಲಿ ಸಾರ್ವಜನಿಕ ಸಭೆ ಮುಗಿಸಿ ದೆಹಲಿಗೆ ತೆರಳಲಿದ್ದಾರೆ.

ರಾಹುಲ್ ಹಿಂತಿರುಗಿದ ನಂತರ ಸಿಎಂ ಸಿದ್ದರಾಮಯ್ಯ ರಾಜ್ಯಾದ್ಯಂತ ಪ್ರತ್ಯೇಕ ಪ್ರವಾಸ ಮಾಡಲಿದ್ದಾರೆ. ಸದ್ಯ ಸಿಎಂ ಮೈಸೂರಿನ ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರವನ್ನಷ್ಟೇ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಟಿಕೆಟ್ ಹಂಚಿಕೆ ತಲೆಬಿಸಿಯಿಂದ ಆಚೆ ಬಂದಿರುವ ಕಾಂಗ್ರೆಸ್ ನಾಯಕರು ಇದೀಗ ಪ್ರಚಾರ ತಂತ್ರಗಾರಿಕೆ ಹೆಣೆಯುತ್ತಿದ್ದು, ಯಾರನ್ನು ಎಲ್ಲಿ ಪ್ರಚಾರದ ಕಣಕ್ಕೆ ಇಳಿಸಬೇಕೆಂಬ ಲೆಕ್ಕಾಚಾರ ಆರಂಭವಾಗಿದೆ.